ಸಿವಿರೊಡೊನೆಟ್ಟ್ಕ್ ಸಂಪೂರ್ಣ ವಿಮೋಚನೆ: ರಶ್ಯ ಹೇಳಿಕೆ

Update: 2022-06-26 16:35 GMT

ಕೀವ್, ಜೂ.26: ಹಲವು ವಾರಗಳ ತೀವ್ರ ಹೋರಾಟದ ಬಳಿಕ ಉಕ್ರೇನ್‌ನ ಸಿವಿರೊಡೊನೆಟ್ಸ್ಕ್ ನಗರವನ್ನು ರಶ್ಯದ ಸೇನೆ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ ಎಂದು ನಗರದ ಮೇಯರ್ ಒಲೆಸ್ಕಾಂಡರ್ ಸ್ಟ್ರುಯಿಕ್ ಹೇಳಿದ್ದಾರೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ರಶ್ಯದ ರಕ್ಷಣಾ ಇಲಾಖೆಯ ವಕ್ತಾರ ಇಗೋರ್ ಕೊನಶೆಂಕೋವ್, ಕಡೆಗೂ ಸಿವಿರೊಡೊನೆಟ್ಸ್ಕ್ ನಗರ ಹಾಗೂ ಅದರ ಸಮೀಪದ ಬೊರಿವಿಸ್ಕ್, ವೊರೊನೊವ್ ಮತ್ತು ಸಿರೊಟೈನ್ ಗ್ರಾಮಗಳನ್ನು ಸಂಪೂರ್ಣ ವಿಮೋಚನೆಗೊಳಿಸಲಾಗಿದೆ ಎಂದಿದ್ದರು. 

ಲುಗಾಂಸ್ಕ್ ವಲಯದ ಮಿತಿಯೊಳಗಿನ ಡೊನೆಟ್ಸ್ ನದಿಯ ಎಡದಂಡೆಯ ಎಲ್ಲಾ ಪ್ರದೇಶಗಳು ರಶ್ಯನ್ ಸೇನೆ ಮತ್ತು ರಶ್ಯ ಪರ ಸೇನೆಯ ನಿಯಂತ್ರಣದಲ್ಲಿವೆ ಎಂದವರು ಹೇಳಿದ್ದಾರೆ. ಸುಮಾರು 1 ಲಕ್ಷ ಜನಸಂಖ್ಯೆಯಿರುವ ಸಿವಿರೊಡೊನೆಟ್ಸ್ಕ್ ನಗರದಿಂದ ತನ್ನ ಪಡೆಯನ್ನು ಹಿಂಪಡೆದುಕೊಂಡು ಪಕ್ಕದ ನಗರ ಲಿಸಿಚಾಂಸ್ಕ್‌ನ ರಕ್ಷಣೆಗೆ ನಿಯೋಜಿಸಲಾಗುವುದು ಎಂದು ಉಕ್ರೇನ್ ಸೇನೆ ಶುಕ್ರವಾರ ಹೇಳಿತ್ತು. ಕಳೆದ ಸುಮಾರು 3 ತಿಂಗಳಿಂದ ಅಝೋಟ್ ರಾಸಾಯನಿಕ ಸ್ಥಾವರದೊಳಗೆ ಆಶ್ರಯ ಪಡೆದಿದ್ದ ನಾಗರಿಕರು ಇದೀಗ ಅಲ್ಲಿಂದ ಹೊರಬಂದು ಸುರಕ್ಷಿತ ಸ್ಥಳದತ್ತ ತೆರಳುತ್ತಿದ್ದಾರೆ. ರಶ್ಯದ ವಾಯದಾಳಿಯ ಭೀತಿಯಲ್ಲಿ ಮತ್ತು ಸರಿಯಾಗಿ ಆಹಾರ, ನೀರಿನ ವ್ಯವಸ್ಥೆಯಿಲ್ಲದೆ ಇವರು ಮಾನಸಿಕ ಹಾಗೂ ದೈಹಿಕವಾಗಿ ಜರ್ಝರಿತಗೊಂಡಿದ್ದಾರೆ ಎಂದು ಸ್ಟ್ರುಯಿಕ್ ಹೇಳಿದ್ದಾರೆ.

 ರಶ್ಯಸೇನೆ ಮತ್ತು ರಶ್ಯ ಪರ ಹೋರಾಟಗಾರರ ಸೇನೆಯು ಅಝೋಟ್ ಸ್ಥಾವರವನ್ನು ನಿಯಂತ್ರಣಕ್ಕೆ ಪಡೆದಿದ್ದು ಅಲ್ಲಿ ಆಶ್ರಯ ಪಡೆದಿದ್ದ 800ಕ್ಕೂ ಅಧಿಕ ನಾಗರಿಕರನ್ನು ತೆರವುಗೊಳಿಸಲಾಗಿದೆ ಎಂದು ರಶ್ಯ ಪರ ಪ್ರತ್ಯೇಕತಾವಾದಿಗಳ ಗುಂಪಿನ ಪ್ರತಿನಿಧಿ ಹೇಳಿದ್ದಾರೆ. ಲಿಸಿಚಾಂಸ್ಕ್ ನಗರವನ್ನೂ ಕೈವಶ ಮಾಡಿಕೊಂಡರೆ ಲುಗಾಂಸ್ಕ್ ವಲಯದ ಹೆಚ್ಚಿನ ಪ್ರದೇಶ ರಶ್ಯದ ನಿಯಂತ್ರಣಕ್ಕೆ ಬರುತ್ತದೆ ಮತ್ತು ಈ ಮೂಲಕ ಡೊನ್ಬಾಸ್‌ನತ್ತ ಮುಂದುವರಿಯಲು ಸುಲಭವಾಗಲಿದೆ ಎಂದು ರಶ್ಯ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News