ಪ್ರಥಮ ಟಿ-20: ಭಾರತಕ್ಕೆ ಸುಲಭ ತುತ್ತಾದ ಐರ್ಲೆಂಡ್

Update: 2022-06-27 02:14 GMT
ಇಶಾನ್ ಕಿಶನ್ (PTI)

ಮಲಹೈಡ್: ಐರ್ಲೆಂಡ್‍ನ ಸ್ಫೂರ್ತಿದಾಯಕ ಹೋರಾಟವನ್ನು ಯಶಸ್ವಿಯಾಗಿ ತಡೆದ ಭಾರತ ಟಿ-20 ತಂಡ ರವಿವಾರ ನಡೆದ ಪ್ರಥಮ ಟಿ-20 ಪಂದ್ಯದಲ್ಲಿ ಏಳು ವಿಕೆಟ್‍ಗಳ ಸುಲಭ ಜಯ ಸಾಧಿಸಿದೆ.

ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ 64 ರನ್ ಗಳಿಸಿದ ಹ್ಯಾರಿ ಟೆಕ್ಟರ್, ಐರ್ಲೆಂಡ್ ತಂಡ 12 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಲು ನೆರವಾದರು. 109 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಿಂದಲೇ ಉತ್ತರ ರನ್‍ರೇಟ್ ಕಾಯ್ದುಕೊಂಡಿತು. ಇಶಾನ್ ಕಿಶನ್ (11 ಎಸೆತಗಳಲ್ಲಿ 26), ದೀಪಕ್ ಹೂಡಾ (29 ಎಸೆತಗಳಲ್ಲಿ ಅಜೇಯ 47), ಹಾರ್ದಿಕ್‍ಪಾಂಡ್ಯ (12 ಎಸೆತಗಳಲ್ಲಿ 24) ಅವರು ಭಾರತ ಕೇವಲ 9.2 ಓವರ್‍ಗಳಲ್ಲಿ ಗೆಲುವು ಸಾಧಿಸಲು ಕೊಡುಗೆ ನೀಡಿದರು.

ಅತ್ಯುತ್ತಮ ಫಾರ್ಮ್‍ನಲ್ಲಿರುವ ಕಿಶನ್ ಅರಂಭದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್‍ನಲ್ಲೇ ಎರಡು ಬೌಂಡರಿ ಹಾಗೂ ಸಿಕ್ಸರ್ ಸೇರಿ 15 ರನ್ ಬಾಚಿದರು. ಅಚ್ಚರಿಯ ನಡೆಯಲ್ಲಿ ದೀಪಕ್ ಹೂಡಾ ಕಿಶನ್ ಜತೆ ಇನಿಂಗ್ಸ್ ಆರಂಭಿಸಿದರು. ಅವರು ಹಾರ್ದಿಕ್ ಪಾಂಡ್ಯ ಅವರ ಜತೆ 64 ರನ್‍ಗಳ ಜತೆಯಾಟ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತದ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಕ್ರೆಗ್ ಯಂಗ್ ಸತತ ಎರಡು ಎಸೆತಗಳಲ್ಲಿ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ (0) ಅವರ ವಿಕೆಟ್ ಕಬಳಿಸಿ, ತಂಡದ ಆಸೆಯನ್ನು ಜೀವಂತ ಇರಿಸಿದರು. ಸಿಕ್ಸರ್ ಹೊಡೆಯುವ ಯತ್ನದಲ್ಲಿ ಕಿಶನ್ ವಿಕೆಟ್ ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News