ರಶ್ಯದ ವಿರುದ್ಧ ಹೊಸ ನಿರ್ಬಂಧ ಜಾರಿಗೆ ಜಿ7 ಮುಖಂಡರ ನಿರ್ಧಾರ: ಅಮೆರಿಕ ಘೋಷಣೆ

Update: 2022-06-27 16:29 GMT

ವಾಷಿಂಗ್ಟನ್, ಜೂ.27: ರಶ್ಯದ ರಕ್ಷಣಾ ವಲಯವನ್ನು ಗುರಿಯಾಗಿಸಿಕೊಂಡು ಹೊಸ ನಿರ್ಬಂಧ ಜಾರಿಗೊಳಿಸಲು ಜಿ7 ಮುಖಂಡರು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಶ್ವೇತಭವನದ ಹೇಳಿಕೆ ತಿಳಿಸಿದೆ.

 ತನ್ನ ಶಸ್ತ್ರಾಸ್ತ್ರ ಉದ್ಯಮದ ಕಾರ್ಯಗಳಿಗೆ ಪಾಶ್ಚಿಮಾತ್ಯ ತಂತ್ರಜ್ಞಾನದ ನೆರವು ಪಡೆಯಲು ರಶ್ಯಕ್ಕೆ ಸಾಧ್ಯವಾಗದಂತೆ ಮಾಡುವುದು ಮತ್ತು ಈ ಮೂಲಕ ಉಕ್ರೇನ್ನಲ್ಲಿ ರಶ್ಯದ ಯುದ್ಧವ್ಯವಸ್ಥೆಯನ್ನು ನಿಧಾನಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ . ಈ ನಿಟ್ಟಿನಲ್ಲಿ ಸಂಘಟಿತ ಕ್ರಮ ಕೈಗೊಳ್ಳಲು ಜಿ7 ದೇಶಗಳು ಸಹಮತ ವ್ಯಕ್ತಪಡಿಸಿವೆ. ಉಕ್ರೇನ್ ವಿರುದ್ಧದ ಕ್ರೂರ ಯುದ್ಧದಲ್ಲಿ ತಾನು ಕಳೆದುಕೊಂಡಿರುವ ಯುದ್ಧಸಾಧನದ ಬದಲಿಗೆ ಹೊಸ ಯುದ್ಧಸಾಧನವನ್ನು ನಿಯೋಜಿಸುವ ರಶ್ಯದ ಪ್ರಯತ್ನವನ್ನು ತಡೆಯಲು ಮತ್ತು ರಶ್ಯದ ರಕ್ಷಣಾ ಪೂರೈಕೆ ಸರಪಳಿಯನ್ನು ಗುರಿಯಾಗಿಸಿಕೊಂಡು ಅಮೆರಿಕವೂ ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿಕೆ ತಿಳಿಸಿದೆ.

 ರಶ್ಯದ ತೈಲ ಆಮದಿನ ಮೇಲೆ ದರಮಿತಿಯನ್ನು ನಿಗದಿಗೊಳಿಸುವ ಕುರಿತ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಇದನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಇತರ ಜಿ7 ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ರಶ್ಯದ ಪ್ರಮುಖ ಆದಾಯ ಮೂಲವನ್ನು ಕಡಿತಗೊಳಿಸುವುದು ಹಾಗೂ ರಶ್ಯ ತೈಲದ ದರವನ್ನು ಇಳಿಸುವುದು ಇದರ ಉದ್ದೇಶವಾಗಿದೆ. ರಶ್ಯದ ಸರಕಿನ ಮೇಲೆ ವಿಧಿಸುವ ಹೆಚ್ಚುವರಿ ತೆರಿಗೆಯ ಮೊತ್ತವನ್ನು ಉಕ್ರೇನ್ ಸಹಾಯ ನಿಧಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ತಾನು ನಡೆಸುತ್ತಿರುವ ಯುದ್ಧದ ವೆಚ್ಚವನ್ನು ರಶ್ಯ ಸ್ವತಃ ಭರಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News