×
Ad

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ನ ಇಯಾನ್ ಮೊರ್ಗನ್ ವಿದಾಯ

Update: 2022-06-28 22:17 IST
Photo:PTI

ಲಂಡನ್, ಜೂ.28: ಇಂಗ್ಲೆಂಡ್‌ನ ಇಯಾನ್ ಮೊರ್ಗನ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ವಿಶ್ವಕಪ್ ವಿಜೇತ ತಂಡದ ನಾಯಕ ಮೊರ್ಗನ್ ಮಂಗಳವಾರ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.

 2019ರಲ್ಲಿ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ ವಿಶ್ವಕಪ್ ಗೆಲ್ಲಲು ತಂಡದ ನಾಯಕತ್ವವಹಿಸಿದ್ದ ಮೊರ್ಗನ್ 126 ಏಕದಿನ ಹಾಗೂ 72 ಟ್ವೆಂಟಿ-20 ಪಂದ್ಯಗಳಲ್ಲಿ ಇಂಗ್ಲೆಂಡ್ ನಾಯಕತ್ವವಹಿಸಿದ್ದರು. ಈ ಎರಡು ಮಾದರಿಯ ಕ್ರಿಕೆಟ್‌ನಲ್ಲಿ 118 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಇದೊಂದು ದಾಖಲೆಯಾಗಿದೆ.

 35 ರ ಹರೆಯದ ಮೊರ್ಗನ್ ಇಂಗ್ಲೆಂಡ್ ಪರವಾಗಿ ಗರಿಷ್ಠ ಏಕದಿನ ರನ್(6,957 ರನ್), ಗರಿಷ್ಠ ಟ್ವೆಂಟಿ-20 ರನ್(2,458 ರನ್), ಎರಡೂ ಮಾದರಿ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.
  
  ಮೊರ್ಗನ್ 2006ರಲ್ಲಿ 16ನೇ ವಯಸ್ಸಿನಲ್ಲಿ ಐರ್‌ಲ್ಯಾಂಡ್ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. 2009ರಲ್ಲಿ ಇಂಗ್ಲೆಂಡ್ ಪರ ಆಡುವ ಅವಕಾಶ ಪಡೆದರು. ಇಂಗ್ಲೆಂಡ್ ಪರ 248 ಏಕದಿನ ಹಾಗೂ 115 ಟಿ-20 ಪಂದ್ಯಗಳನ್ನು ಆಡಿದ್ದು, ಒಟ್ಟು 10,159 ರನ್ ಗಳಿಸಿದ್ದಾರೆ. 16 ಟೆಸ್ಟ್ ಪಂದ್ಯಗಳಲ್ಲಿ 700 ರನ್ ಗಳಿಸಿದ್ದಾರೆ.

"ನನ್ನ ವೃತ್ತಿಜೀವನದ ಅಧ್ಯಾಯಕ್ಕೆ ಅಂತ್ಯ ಹಾಡುವ ಈ ನಿರ್ಧಾರ ಸುಲಭವಾಗಿರಲಿಲ್ಲ. ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ನಂಬಿರುವೆ. ನಾನು ಎರಡು ವಿಶ್ವಕಪ್ ವಿಜೇತ ತಂಡಗಳೊಂದಿಗೆ ಆಡುವ ಅದೃಷ್ಟ ಪಡೆದಿದ್ದೆ. ಇಂಗ್ಲೆಂಡ್‌ನ ಸೀಮಿತ ಓವರ್ ತಂಡಗಳ ಭವಿಷ್ಯ ಉಜ್ವಲವಾಗಿದೆ'' ಎಂದು ಮೊರ್ಗನ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News