ಆಕಸ್ಮಿಕವಾಗಿ 286 ಪಟ್ಟು ಹೆಚ್ಚು ಸಂಬಳ ಪಡೆದ ಉದ್ಯೋಗಿ ರಾಜಿನಾಮೆ ನೀಡಿ ನಾಪತ್ತೆ!

Update: 2022-06-29 12:29 GMT
ಸಾಂದರ್ಭಿಕ ಚಿತ್ರ 

ಚಿಲಿ ದೇಶದ ಕಂಪೆನಿಯೊಂದು ಪ್ರಮಾದವಶಾತ್ ತನ್ನ ಉದ್ಯೋಗಿಯೊಬ್ಬನಿಗೆ ಆತನ ಮಾಸಿಕ ವೇತನದ 286 ಪಟ್ಟು ಅಧಿಕ ವೇತನ ಅಂದರೆ ಬರೋಬ್ಬರಿ ರೂ. 1.4 ಕೋಟಿಯಷ್ಟು ಹಣವನ್ನು ನೀಡಿ ಈಗ ಕೈಕೈ ಹಿಚುಕಿಕೊಳ್ಳುತ್ತಿದೆ. ಏಕೆಂದರೆ ಅಷ್ಟೂ ಹಣ ತನ್ನದಾಗಿಸಿಕೊಂಡ ಆ ವ್ಯಕ್ತಿ ಈಗ ಎಲ್ಲಿದ್ದಾನೆಂದು ತಿಳಿದಿಲ್ಲ ಎಂದು ವರದಿಯಾಗಿದೆ.

ಚಿಲಿ ದೇಶದ ಫುಡ್ ಇಂಡಸ್ಟ್ರಿಯಲ್ ಕನ್ಸಾರ್ಟಿಯಂ ಇದರ ಮಾನವ ಸಂಪನ್ಮೂಲಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ. ಚಿಲಿಯ ಖ್ಯಾತ ಬ್ರ್ಯಾಂಡ್‍ಗಳಾದ ಸಾನ್ ಜಾರ್ಜ್, ಲಾ ಪ್ರಿಫೆರಿಡಾ ಮತ್ತು ವಿಂಟರ್ ಉತ್ಪನ್ನಗಳು ಈ ಕಂಪೆನಿಯದ್ದಾಗಿದೆ. ಚಿಲಿಯಲ್ಲಿ ಸೆಸಿನಾಸ್ (ಸ್ಪಾನಿಷ್ ಮೂಲದ ಡಿಹೈಡ್ರೇಟೆಡ್ ಮಾಂಸ) ಒದಗಿಸುವ ದೇಶದ ಅತಿ ದೊಡ್ಡ ಕಂಪೆನಿಯೂ ಇದಾಗಿದೆ.

ಇತ್ತೀಚೆಗೆ ಈ ಕಂಪೆನಿ ತನ್ನ ಒಬ್ಬ ಉದ್ಯೋಗಿಗೆ 500,000 ಚಿಲಿಯನ್ ಪೆಸೋಸ್ (ರೂ. 43,000) ನೀಡುವ ಬದಲು 165,398,851 ಚಿಲಿಯನ್ ಪೆಸೋಸ್ (ರೂ. 1.42ಕೋಟಿ) ಹಣವನ್ನು ವೇತನವಾಗಿ ಆತನ ಖಾತೆಗೆ ವರ್ಗಾಯಿಸಿತ್ತು. ಇದನ್ನು ತಿಳಿದ ಉದ್ಯೋಗಿ ಮೇ 30 ರಂದು ಕಂಪೆನಿಯ ವಿತರಣಾ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಬಳಿ ತನಗೆ 165.3 ಮಿಲಿಯನ್ ಪೆಸೋಸ್ ತಪ್ಪಾಗಿ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದ. ಅದಕ್ಕೆ ಆತನಿಗೆ ಬ್ಯಾಂಕ್‍ಗೆ ತೆರಳಿ ಕಂಪೆನಿಯ ಹೆಸರಿನಲ್ಲಿ ಒಂದು ವೋಚರ್ ಪಡೆಯುವಂತೆ ಸೂಚಿಸಲಾಗಿತ್ತು.

ಆ ಉದ್ಯೋಗಿ ಅದಕ್ಕೆ ಒಪ್ಪಿ ಹೆಚ್ಚುವರಿ ಮೊತ್ತವನ್ನು ಕಂಪೆನಿಗೆ ವಾಪಸ್ ನೀಡುವುದಾಗಿ ಹೇಳಿದ್ದ. ನಂತರ ಆತ ತಡವಾಗಿ ಫೋನ್ ಸ್ವೀಕರಿಸಿ ತಾನು ನಿದ್ದೆ ಹೋಗಿದ್ದರಿಂದ ಫೋನ್ ಸ್ವೀಕರಿಸಲಿಲ್ಲ ಎಂದಿದ್ದ. ಅದರ ನಂತರ ಮೂರು ದಿನ ಆಸಾಮಿಯ ಪತ್ತೆಯೇ ಇಲ್ಲ ಎಂದು ತಿಳಿದು ಬಂದಿದೆ. ನಂತರ ಜೂನ್ 2ರಂದು ಆತ ತನ್ನ ವಕೀಲರೊಂದಿಗೆ ಬಂದು ರಾಜೀನಾಮೆ ಹಸ್ತಾಂತರಿಸಿ ನಾಪತ್ತೆಯಾಗಿದ್ದಾನೆ.

ಕಂಪೆನಿಯು ಈಗ ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News