ಲೈಂಗಿಕ ಅಪರಾಧ : ಗಾಯಕ ಆರ್.ಕೆಲ್ಲಿಗೆ 30 ವರ್ಷ ಜೈಲುಶಿಕ್ಷೆ

Update: 2022-07-01 15:47 GMT

ವಾಷಿಂಗ್ಟನ್, ಜು.1: ತನ್ನ ಸೆಲೆಬ್ರಿಟಿ ಸ್ಥಾನಮಾನ ಮತ್ತು ಸಂಪತ್ತನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮೆರಿಕದ ಖ್ಯಾತ ಪಾಪ್ ಗಾಯಕ ಆರ್.ಕೆಲ್ಲಿಗೆ 30 ವರ್ಷದ ಜೈಲುಶಿಕ್ಷೆ ಘೋಷಿಸಲಾಗಿದೆ. 

ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಅಮೆರಿಕ ಜಿಲ್ಲಾ ನ್ಯಾಯಾಧೀಶೆ ಆ್ಯನ್ ಡಾನ್ಲೆ ಈ ತೀರ್ಪು ಪ್ರಕಟಿಸಿದ್ದಾರೆ. ಸುಮಾರು 6 ವಾರಗಳ ವಿಚಾರಣೆ ಬಳಿಕ 55 ವರ್ಷದ ಕೆಲ್ಲಿ ಅವರು ದೋಷಿಯೆಂದು ಕಳೆದ ಸೆಪ್ಟಂಬರ್‌ನಲ್ಲಿ ಘೋಷಿಸಲಾಗಿತ್ತು. ಶಿಕ್ಷೆಯನ್ನು ಇದೀಗ ಪ್ರಕಟಿಸಲಾಗಿದೆ. 

ʼಮೀ ಟೂ’ ಅಭಿಯಾನದಡಿ ಲೈಂಗಿಕ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾದ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೆಲ್ಲಿ ಮೊದಲ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ‘ಲೈಂಗಿಕತೆಯು ಖಂಡಿತವಾಗಿಯೂ ನೀವು ಬಳಸಿದ ಅಸ್ತ್ರವಾಗಿದ್ದರೂ ಇದು ಲೈಂಗಿಕತೆಯ ಬಗ್ಗೆಯಲ್ಲ, ಇದು ಹಿಂಸೆ, ಕ್ರೌರ್ಯ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶೆ ಹೇಳಿದ್ದಾರೆ.

ಕೆಲ್ಲಿಯ ಬಾಲ್ಯವು ಲೈಂಗಿಕ ನಿಂದನೆ, ಬಡತನ ಮತ್ತು ಹಿಂಸೆಯಿಂದ ಕೂಡಿದ್ದು ಆಘಾತಕಾರಿ ಬಾಲ್ಯವನ್ನು ಹೊಂದಿದ್ದರಿಂದ ಅವರ ಶಿಕ್ಷೆಯನ್ನು 10 ವರ್ಷಕ್ಕೆ ಸೀಮಿತಗೊಳಿಸಬೇಕು ಎಂದು ಅವರ ವಕೀಲರು ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ಬೃಹತ್ ಅಭಿಮಾನಿ ಸಮೂಹವನ್ನು ಹೊಂದಿರುವ ಕೆಲ್ಲಿ ವಿರುದ್ಧ ಇನ್ನೂ ಎರಡು ಪ್ರಕರಣದ ವಿಚಾರಣೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News