ಭಾರತದ ವಿರುದ್ಧ 5ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

Update: 2022-07-03 02:47 GMT
ಬೂಮ್ರಾ

ಬರ್ಮಿಂಗ್‍ಹ್ಯಾಮ್: ಬ್ಯಾಟಿಂಗ್‍ನಲ್ಲಿ ಒಂದೇ ಓವರ್‍ನಲ್ಲಿ ಗರಿಷ್ಠ ರನ್‌ ಗಳಿಸಿ ದಾಖಲೆ ಮಾಡಿದ ಬೂಮ್ರಾ ಬೌಲಿಂಗ್‍ನಲ್ಲೂ ಮಿಂಚಿ ಅತಿಥೇಯ ಇಂಗ್ಲೆಂಡ್ ತಂಡವನ್ನು ಮಳೆಬಾಧಿತ 5ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಕೇವಲ 16 ಎಸೆತಗಳಲ್ಲಿ 31 ರನ್ ಸಿಡಿಸಿದ ಬೂಮ್ರಾ, ಬೌಲಿಂಗ್‍ನಲ್ಲಿ 35 ರನ್‍ಗಳಿಗೆ 3 ವಿಕೆಟ್ ಕೀಳೂವ ಮೂಲಕ ತಮ್ಮ ನಾಯಕತ್ವದ ಚೊಚ್ಚಲ ಟೆಸ್ಟ್ ನಲ್ಲಿ ಸ್ಮರಣೀಯ ಪ್ರದರ್ಶನ ದಾಖಲಿಸಿದರು. ಇದರಿಂದಾಗಿ ರವೀಂದ್ರ ಜಡೇಜಾ ಅವರ ಉಪಯುಕ್ತ ಶತಕದ ಸಾಧನೆ ಮಬ್ಬಾಯಿತು. ‌

ಮೊದಲ ಇನಿಂಗ್ಸ್ ನಲ್ಲಿ ಭಾರತದ 416 ರನ್‍ಗಳಿಗೆ ಪ್ರತಿಯಾಗಿ ಶನಿವಾರ ಎರಡನೇ ದಿನದ ಆಟ ಮುಕ್ತಾಯದ ವೇಳೆಗೆ ಇಂಗ್ಲೆಂಡ್ 84 ರನ್‍ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ತಂಡ ಮೊದಲ ಇನಿಂ‌ಗ್ಸ್ ನಲ್ಲಿ 332 ರನ್ ಹಿನ್ನಡೆ ಹೊಂದಿದೆ.‌

ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಅಲೆಕ್ಸ್ ಲೀಸ್ (6), ಝೆಕ್ ಕ್ರಾವ್ಲೆ (9) ಅವರನ್ನು ಅಗ್ಗದ ಮೊತ್ತಕ್ಕೆ ಪೆವಿಲಿಯನ್‍ಗೆ ಅಟ್ಟಿದ ಬೂಮ್ರಾ, ಬಳಿಕ ಬಂದ ಒಲೀ ಪೋಪ್ (10) ಅವರ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಪತನಕ್ಕೆ ನಾಂದಿ ಹಾಡಿದರು. ‌

ಉದಯೋನ್ಮುಖ ಬೌಲರ್ ಮೊಹ್ಮದ್ ಸಿರಾಜ್ ಅವರು ಅಪಾಯಕಾರಿ ಬ್ಯಾಟ್ಸ್ ಮನ್ ಜೋ ರೂಟ್ ಅವರ ವಿಕೆಟ್ ಪಡೆದರೆ, ಜ್ಯಾಕ್ ಲೀಚ್ (0) ಅವರನ್ನು ಶಮಿ ಔಟ್ ಮಾಡಿದರು. 27 ಓವರ್‍ಗಳಲ್ಲಿ ಕೇವಲ 84 ರನ್ ಕಲೆ ಹಾಕಿರುವ ಇಂಗ್ಲೆಂಡ್  ತೀವ್ರ ಸಂಕಷ್ಟದಲ್ಲಿದೆ.‌

ಭಾರತ ಪಟೌಡಿ ಟ್ರೋಫಿಯನ್ನು ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದು, ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಸ್ಥಾನ ಪಡೆಯುವ ರೇಸ್‍ನಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News