ಐದನೇ ಟೆಸ್ಟ್: ರೂಟ್,ಬೈರ್‌ಸ್ಟೋವ್ ಶತಕ, ಇಂಗ್ಲೆಂಡ್‌ಗೆ 7 ವಿಕೆಟ್ ಜಯ

Update: 2022-07-05 11:29 GMT
Photo:AP

  ಬರ್ಮಿಂಗ್‌ಹ್ಯಾಮ್, ಜು.5: ಮಾಜಿ ನಾಯಕ ಜೋ ರೂಟ್ (ಔಟಾಗದೆ 142 ರನ್, 173 ಎಸೆತ, 19 ಬೌಂಡರಿ, 1 ಸಿಕ್ಸರ್) ಹಾಗೂ ಜಾನಿ ಬೈರ್‌ಸ್ಟೋವ್ (ಔಟಾಗದೆ 114 ರನ್, 145 ಎಸೆತ, 15 ಬೌಂಡರಿ, 1 ಸಿಕ್ಸರ್) ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 200ಕ್ಕೂ ಅಧಿಕ ರನ್ ಸೇರಿಸಿ ಭಾರತ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಅಂತಿಮ ದಿನವಾದ ಮಂಗಳವಾರ ಇಂಗ್ಲೆಂಡ್ ಗೆಲುವಿಗೆ 119 ರನ್ ಗಳಿಸಬೇಕಾಗಿತ್ತು. 4ನೇ ವಿಕೆಟಿಗೆ 269 ರನ್ ಜೊತೆಯಾಟ ನಡೆಸಿದ ರೂಟ್ ಹಾಗೂ ಬೈರ್‌ಸ್ಟೋವ್ ಇಂಗ್ಲೆಂಡ್ 76.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ಮಾತ್ರವಲ್ಲ 5 ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸುವಲ್ಲಿಯೂ ನೆರವಾದರು.

ಇದೇ ವೇಳೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗೆಲುವಿಗೆ ಗರಿಷ್ಠ ರನ್ (378 ರನ್)ಚೇಸಿಂಗ್ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು.

ಸೋಮವಾರ 4ನೇ ದಿನದಾಟದಲ್ಲಿ ಗೆಲುವಿಗೆ 378 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತ್ತು. ಜೋ ರೂಟ್(ಔಟಾಗದೆ 76) ಹಾಗೂ ಬೈರ್‌ಸ್ಟೋವ್(ಔಟಾಗದೆ 72) ಕ್ರೀಸ್ ಕಾಯ್ದುಕೊಂಡಿದ್ದರು. ಮಂಗಳವಾರ ಈ ಇಬ್ಬರು ಬ್ಯಾಟರ್‌ಗಳು ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಅಸಾಮಾನ್ಯ ಗೆಲುವು ತಂದುಕೊಟ್ಟರು. ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದ ಭಾರತ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಜಸ್‌ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಇದು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್ ಸತತ 4ನೇ ಪಂದ್ಯವನ್ನು ಗೆದ್ದುಕೊಂಡಿತು. ನ್ಯೂಝಿಲ್ಯಾಂಡ್ ವಿರುದ್ಧ ಈಗಾಗಲೇ ಸ್ವದೇಶದಲ್ಲಿ ಸತತ 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ನಾಲ್ಕು ಪಂದ್ಯಗಳನ್ನು ರನ್ ಚೇಸಿಂಗ್ ಮಾಡಿ ಗೆದ್ದಿರುವುದು ವಿಶೇಷ. 4 ಪಂದ್ಯಗಳಲ್ಲಿ ಬೈರ್‌ಸ್ಟೋವ್ 4 ಶತಕ ಸಿಡಿಸಿದ್ದಾರೆ. ರೂಟ್ ಈ ಸರಣಿಯೊಂದರಲ್ಲೇ 4 ಶತಕ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News