ಬಾಹ್ಯಾಕಾಶ ಕಾರ್ಯಕ್ರಮದ ಮೂಲಕ ʼಚಂದ್ರನ ಸ್ವಾಧೀನಕ್ಕೆʼ ಚೀನಾ ಯೋಜನೆ: ಅಮೆರಿಕ ಆರೋಪ

Update: 2022-07-05 16:49 GMT

ಬೀಜಿಂಗ್, ಜು.5: ಚೀನಾವು ತನ್ನ ಮಿಲಿಟರಿ ಬಾಹ್ಯಾಕಾಶ ಕಾರ್ಯಕ್ರಮದ ಪ್ರಕಾರ ಚಂದ್ರನನ್ನು ಸ್ವಾಧೀನ ಪಡಿಸಿಕೊಳ್ಳಲು ಯೋಜನೆ ರೂಪಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಯೋಜನೆ ವಿಭಾಗ(ನಾಸಾ) ಮುಖ್ಯಸ್ಥರು ಆರೋಪಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಚೀನಾ, ಅಮೆರಿಕವು ಈಗ ಬಾಹ್ಯಾಕಾಶವನ್ನೂ ಯುದ್ಧದ ಕ್ಷೇತ್ರವನ್ನಾಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ತಿರುಗೇಟು ನೀಡಿದೆ.
 
ಚೀನಾವು ಶೀಘ್ರದಲ್ಲೇ ಚಂದ್ರನ ಮೇಲೆ ಇಳಿದು ‘ಇದು ಈಗ ನಮ್ಮದು, ನೀವ್ಯಾರೂ ಇದರ ಹತ್ತಿರಕ್ಕೂ ಸುಳಿಯಬಾರದು’ ಎಂದು ಹೇಳುವ ಸಂಭವನೀಯತೆ ಅತ್ಯಂತ ಅಧಿಕವಾಗಿದ್ದು ಈ ಅತಂಕವನ್ನು ಎದುರಿಸಲು ವಿಶ್ವ ಸಿದ್ಧರಿರಬೇಕು ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಜರ್ಮನಿಯ ದಿನಪತ್ರಿಕೆ ‘ಬಿಲ್ಡ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

 ಬಾಹ್ಯಾಕಾಶದಲ್ಲಿ ಯಾವ ರೀತಿಯ ಸೇನಾ ಕಾರ್ಯಾಚರಣೆಯನ್ನು ಚೀನಾ ನಡೆಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನೆಲ್ಸನ್, ಇತರ ದೇಶಗಳ ಉಪಗ್ರಹಗಳನ್ನು ಯಾವ ರೀತಿ ನಾಶಗೊಳಿಸುವುದು ಎಂಬ ಬಗ್ಗೆ ಚೀನಾದ ಗಗನಯಾತ್ರಿಗಳು ಅಧ್ಯಯನ ನಡೆಸಲಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಕುರಿತಾದ ಪೈಪೋಟಿ ಹೆಚ್ಚಲಿದೆ. 

2035ರೊಳಗೆ ಚೀನಾವು ಚಂದ್ರನ ಮೇಲೆ ನಿಲ್ದಾಣ ಸ್ಥಾಪಿಸಿ ಅಧ್ಯಯನ ನಡೆಸಲಿದೆ ಎಂದರು. ಇದಕ್ಕೆ ತಿರುಗೇಟು ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್, ಅಮೆರಿಕದ ಬಾಹ್ಯಾಕಾಶ ಯೋಜನೆ ವಿಭಾಗದ ಮುಖ್ಯಸ್ಥರು ವಾಸ್ತವಾಂಶವನ್ನು ಗಮನಿಸದೆ, ಚೀನಾದ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿರುವುದು ಇದು ಮೊದಲ ಬಾರಿಯೇನಲ್ಲ ಎಂದಿದ್ದಾರೆ. 

ಚೀನಾದ ಸಹಜ ಬಾಹ್ಯಾಕಾಶ ಯೋಜನೆಯ ವಿರುದ್ಧ ಅಮೆರಿಕ ನಿರಂತರ ಕಪಟ ಅಭಿಯಾನ ನಡೆಸುತ್ತಿದ್ದು ಚೀನಾ ಇಂತಹ ಬೇಜವಾಬ್ದಾರಿಯ ಹೇಳಿಕೆಯನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಲಿಝಿಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News