ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿ: ಭಾರತಕ್ಕೆ ಶಿಖರ್ ಧವನ್ ನಾಯಕತ್ವ

Update: 2022-07-06 12:09 GMT
Photo:twitter

 ಹೊಸದಿಲ್ಲಿ, ಜು.6: ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಿರಿಯ ಬ್ಯಾಟರ್ ಶಿಖರ್ ಧವನ್ ವೆಸ್ಟ್‌ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ನಾಯಕತ್ವವಹಿಸಲಿದ್ದಾರೆ. ಜುಲೈ 22ರಂದು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆರಂಭವಾಗಲಿರುವ ಸರಣಿಯಿಂದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.

ಇತರ ಇಬ್ಬರು ಹಿರಿಯ ಆಟಗಾರರಾದ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಶಮಿಗೆ ಕೂಡ ವಿಶ್ರಾಂತಿ ನೀಡಲಾಗಿದೆ. ಇತ್ತೀಚೆಗೆ ಐಪಿಎಲ್‌ನಲ್ಲಿ ಭಾರೀ ಯಶಸ್ಸು ಗಳಿಸಿ ಭಾರತ ತಂಡಕ್ಕೆ ವಾಪಸಾಗಿದ್ದ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಜುಲೈ 12ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆಯದ ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಹಾಗೂ ಅವೇಶ್ ಖಾನ್ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿರುವ 16 ಸದಸ್ಯರುಗಳನ್ನು ಒಳಗೊಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಏಕದಿನ ಕ್ರಿಕೆಟ್ ಆಡಿದ್ದ ಶುಭಮನ್ ಗಿಲ್ ಆಯ್ಕೆಗಾರರ ಮನ ಗೆದ್ದಿದ್ದಾರೆ. ಸರಣಿಯಲ್ಲಿ ರವೀಂದ್ರ ಜಡೇಜ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿರುವ ಧವನ್ ಕಳೆದ ವರ್ಷ ಶ್ರೀಲಂಕಾ ಪ್ರವಾಸದಲ್ಲಿ ಮೊದಲ ಬಾರಿ ಭಾರತದ ನಾಯಕತ್ವವಹಿಸಿದ್ದರು.

ಕಳೆದ ಒಂದು ವರ್ಷದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಹಲವು ನಾಯಕರುಗಳನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಟೀಕೆಗಳು ವ್ಯಕ್ತವಾಗಿವೆ. ಗಾಯದ ಸಮಸ್ಯೆಗಳು ಹಾಗೂ ಆಟಗಾರರ ಮೇಲಿನ ಕೆಲಸದ ಭಾರ ತಗ್ಗಿಸುವ ಕ್ರಮವಾಗಿ ಬುಮ್ರಾ, ಪಂತ್, ರಾಹುಲ್, ಹಾರ್ದಿಕ್ ಹಾಗೂ ಧವನ್ ಭಾರತದ ನಾಯಕತ್ವವಹಿಸಿದ್ದರು. ವೆಸ್ಟ್‌ಇಂಡೀಸ್ ವಿರುದ್ಧದ ಎಲ್ಲ 3 ಪಂದ್ಯಗಳು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿದೆ.
ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಿಂತ ಮೊದಲು ಭಾರತವು ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದು ಅಚ್ಚರಿ ನಡೆ ಎನಿಸಿಲ್ಲ.

ಏಕದಿನ ಸರಣಿಯ ಬಳಿಕ ಭಾರತವು ವೆಸ್ಟ್‌ಇಂಡೀಸ್ ವಿರುದ್ದ ಕೆರಿಬಿಯನ್ ನಾಡಿನಲ್ಲಿ ಹಾಗೂ ಅಮೆರಿಕದಲ್ಲಿ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಈ ಸರಣಿಗೆ ಇನ್ನಷ್ಟೇ ತಂಡ ವನ್ನು ಆಯ್ಕೆ ಮಾಡಬೇಕಾಗಿದೆ.
ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಿಂತ ಮೊದಲು ಪ್ರತಿ ಪಂದ್ಯವೂ ಅತ್ಯಂತ ಮುಖ್ಯವಾಗಿರುವ ಕಾರಣ ಹಿರಿಯ ಆಟಗಾರರು ಜುಲೈ 29ರಿಂದ ಆಗಸ್ಟ್ 7 ರ ತನಕ ನಡೆಯುವ 5 ಪಂದ್ಯಗಳ ಸರಣಿಯಲ್ಲಿ ಆಡುವ ಸಾಧ್ಯತೆಯಿದೆ. ಟ್ವೆಂಟಿ-20 ಪಂದ್ಯಗಳ ನ್ನು ಟ್ರಿನಿಡಾಡ್, ಸೈಂಟ್ ಕಿಟ್ಸ್ ಹಾಗೂ ಫ್ಲೋರಿಡಾದಲ್ಲಿ ಆಡಲಾಗುತ್ತದೆ.

ಭಾರತದ ಏಕದಿನ ತಂಡ: ಶಿಖರ್ ಧವನ್(ನಾಯಕ), ರವೀಂದ್ರ ಜಡೇಜ(ಉಪ ನಾಯಕ), ಋತುರಾಜ್ ಗಾಯಕ್ವಾಡ್,ಶುಭಂ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್,ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮುಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News