ಶನಿವಾರ ಶ್ರೀಲಂಕಾದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ: ಬಿಗು ಬಂದೋಬಸ್ತ್ ವ್ಯವಸ್ಥೆ

Update: 2022-07-08 16:23 GMT

ಕೊಲಂಬೊ, ಜು.8: ಅಧ್ಯಕ್ಷ ಗೊತಬಯ ರಾಜಪಕ್ಸ ಪದಚ್ಯುತಿಗೆ ಆಗ್ರಹಿಸಿ ಶನಿವಾರ ಆಯೋಜಿಸಿರುವ ರ್ಯಾಲಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ದ್ವೀಪರಾಷ್ಟ್ರದಲ್ಲಿ ಏರುಗತಿಯಲ್ಲಿರುವ ಹಣದುಬ್ಬರ, ನಿರಂತರ ವಿದ್ಯುತ್ ಕಡಿತ, ಇಂಧನ, ಔಷಧ ವಸ್ತುಗಳ ಸಹಿತ ದೈನಂದಿನ ಬಳಕೆಯ ವಸ್ತುಗಳ ತೀವ್ರ ಕೊರತೆ ಎದುರಾಗಿದೆ. ‌

ದೇಶ ಈ ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿ ಎದುರಾಗಲು ಅಧ್ಯಕ್ಷ ಗೊತಬಯ ರಾಜಪಕ್ಸರ ಅಸಮರ್ಪಕ ಮತ್ತು ಅದಕ್ಷ ಆಡಳಿತ ಕಾರಣ ಎಂದು ಆಕ್ರೋಶಗೊಂಡಿರುವ ಜನತೆ, ಕಳೆದ ಕೆಲವು ತಿಂಗಳಿಂದ ರಾಜಪಕ್ಸರ ಕೊಲಂಬೊ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಅಂಗವಾಗಿ ಶನಿವಾರ ಬೃಹತ್ ರ್ಯಾಲಿ ನಡೆಸುವುದಾಗಿ ಪ್ರತಿಭಟನಾಕಾರರು ಘೋಷಿಸಿರುವ ಹಿನ್ನೆಲೆಯಲ್ಲಿ ಅಸಾಲ್ಟ್ ರೈಫಲ್ಸ್ ಹೊಂದಿರುವ ಯೋಧರನ್ನು ಕೊಲಂಬೋಗೆ ರವಾನಿಸಿದ್ದು, ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಹೆಚ್ಚುವರಿ ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಾಳೆಯ ಪ್ರತಿಭಟನೆ ಹಿಂಸೆಗೆ ತಿರುಗದು ಎಂದು ನಾವು ಆಶಿಸುತ್ತಿದ್ದು ಸುಮಾರು 20,000 ಯೋಧರನ್ನು ಒಳಗೊಂಡ ತುಕಡಿ, ಮಹಿಳಾ ಪೊಲೀಸರ ಸಹಿತ ಹೆಚ್ಚುವರಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪ್ರಾಂತಗಳಲ್ಲಿ ನಿಯೋಜಿಸಿರುವ ಪಡೆಗಳನ್ನು ಕೊಲಂಬೋಕ್ಕೆ ಸ್ಥಳಾಂತರಿಸಲಾಗುವುದು ಎಂದು ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಪ್ರತಿಭಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಲು ನ್ಯಾಯಾಲಯ ನಿರಾಕರಿಸಿರುವುದರಿಂದ ಸರಕಾರಕ್ಕೆ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ. 

ಶನಿವಾರದ ಪ್ರತಿಭಟನೆ ಶಾಂತರೀತಿಯಲ್ಲಿ ನಡೆಯುವುದನ್ನು ಖಾತರಿಪಡಿಸುವಂತೆ ವಿಶ್ವಸಂಸ್ಥೆಯು ಶ್ರೀಲಂಕಾ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರನ್ನು ಆಗ್ರಹಿಸಿದೆ. ಕಾರ್ಯ ನಿರ್ವಹಣೆ ಸಂದರ್ಭ ಭದ್ರತಾ ಸಿಬಂದಿ ಸಂಯಮ ವಹಿಸುವಂತೆ ಹಾಗೂ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗದಂತೆ ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News