2ನೇ ಟ್ವೆಂಟಿ-20: ಜಡೇಜ ಸಾಹಸ, ಇಂಗ್ಲೆಂಡ್‌ಗೆ 171 ರನ್ ಗುರಿ ನೀಡಿದ ಭಾರತ

Update: 2022-07-09 15:28 GMT

 ಬರ್ಮಿಂಗ್‌ಹ್ಯಾಮ್, ಜು. 9: ಕ್ರಿಸ್ ಜೋರ್ಡನ್(4-27) ಹಾಗೂ ರಿಚರ್ಡ್ ಗ್ಲೀಸನ್(3-15) ಅಮೋಘ ಬೌಲಿಂಗ್ ಹೊರತಾಗಿಯೂ ಆಲ್‌ರೌಂಡರ್ ರವೀಂದ್ರ ಜಡೇಜ(ಔಟಾಗದೆ 46, 29 ಎಸೆತ, 5 ಬೌಂಡರಿ) ಅವರ ನಿರ್ಣಾಯಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಇಂಗ್ಲೆಂಡ್‌ಗೆ ಎರಡನೇ ಟ್ವೆಂಟಿ-20 ಪಂದ್ಯದ ಗೆಲುವಿಗೆ 171 ರನ್ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಮಧ್ಯಮ ಕ್ರಮಾಂಕದ ಕುಸಿತಕ್ಕೆ ಒಳಗಾದ ಭಾರತವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿದೆ.

ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(31 ರನ್, 20 ಎಸೆತ, 3 ಬೌಂಡರಿ, 2 ಸಿಕ್ಸರ್)ಹಾಗೂ ರಿಷಭ್ ಪಂತ್(26 ರನ್, 15 ಎಸೆತ, 4 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ರೋಹಿತ್ ವಿಕೆಟನ್ನು ಕಬಳಿಸಿದ ಗ್ಲೀಸನ್ ಈ ಜೋಡಿಯನ್ನು ಬೇರ್ಪಡಿಸಿದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದ್ದ ಭಾರತ ಚೊಚ್ಚಲ ಪಂದ್ಯವನ್ನಾಡಿದ ಗ್ಲೀಸನ್ ದಾಳಿಗೆ ತತ್ತರಿಸಿ 61 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಜಿ ನಾಯಕ ವಿರಾಟ್ ಕೊಹ್ಲಿ(1 ರನ್)ಕಳಪೆ ಪ್ರದರ್ಶನ ಮುಂದುವರಿಸಿ ನಿರಾಸೆಗೊಳಿಸಿದರು.

ಸೂರ್ಯಕುಮಾರ್ ಯಾದವ್(15 ರನ್),ಹಾರ್ದಿಕ್ ಪಾಂಡ್ಯ(12 ರನ್), ದಿನೇಶ್ ಕಾರ್ತಿಕ್(12 ರನ್), ಹರ್ಷಲ್ ಪಟೇಲ್(13 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಪರ ಜಡೇಜ ಸರ್ವಾಧಿಕ ಸ್ಕೋರ್ ಗಳಿಸಿದರು. ಕಾರ್ತಿಕ್ ಅವರೊಂದಿಗೆ 6ನೇ ವಿಕೆಟ್‌ಗೆ 33 ರನ್ ಹಾಗೂ ಪಟೇಲ್ ಅವರೊಂದಿಗೆ 7ನೇ ವಿಕೆಟಿಗೆ 23 ರನ್ ಜೊತೆಯಾಟವನ್ನು ನಡೆಸಿದ ಜಡೇಜ ತಂಡದ ಮೊತ್ತವನ್ನು 170ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News