ಎಲೆನಾ ರಿಬಾಕಿನಾಗೆ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ
ಲಂಡನ್: ರಷ್ಯಾ ಸಂಜಾತೆ ಎಲೆನಾ ರಿಬಾಕಿನಾ ಶನಿವಾರ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್‍ನಲ್ಲಿ ಎದುರಾಳಿ ಟ್ಯುನೇಶಿಯಾದ ಅನಸ್ ಜಾಬೆರ್ ವಿರುದ್ಧ ಮೊದಲ ಸೆಟ್ ಸೋತ ಬಳಿಕ ಪ್ರತಿಹೋರಾಟ ತೋರಿ ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಜಾಬೆರ್ ಅವರನ್ನು 3-6, 6-2, 6-2 ಸೆಟ್‍ಗಳಿಂದ ಮಣಿಸಿದ ರಿಬಾಕಿನಾ ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
"ಈ ಹಿಂದೆ ಎಂದೂ ನನಗೆ ಇಂಥ ಅನುಭವ ಆಗಿರಲಿಲ್ಲ. ಇಷ್ಟು ದೊಡ್ಡ ಸಾಧನೆ ಮಾಡಿದ ಓನ್ಸ್‍ಗೆ ಅಭಿನಂದನೆಗಳು" ಎಂದು ಚಾಂಪಿಯನ್ ರಿಬಾಕಿನಾ ಉದ್ಗರಿಸಿದರು. "ನೀವು ಟ್ಯುನೇಶಿಯಾದ ಎಲ್ಲರಿಗೂ ಸ್ಫೂರ್ತಿ. ಅದ್ಭುತ ಆಟ ಪ್ರದರ್ಶಿಸಿದಿರಿ" ಎಂದು ಎದುರಾಳಿಯನ್ನು ಮುಕ್ತಕಂಠದಿಂದ ಹೊಗಳಿದರು.
ಅದ್ಭುತವಾಗಿ ಆಟ ಆರಂಭಿಸಿದ ಟ್ಯುನೇಶಿಯಾ ಆಟಗಾರ್ತಿ ಮೂರನೇ ಗೇಮ್‍ನಲ್ಲೇ ರಿಬಾಕಿನಾ ಅವರ ಸರ್ವ್ ಮುರಿದು ಅಚ್ಚರಿ ಮೂಡಿಸಿದರು. ತೀವ್ರ ಒತ್ತಡಕ್ಕೆ ಸಿಲುಕಿದ ರಿಬಾಕಿನಾ 17 ತಪ್ಪುಗಳನ್ನು ಎಸಗಿ ಮೊದಲ ಸೆಟ್ ಬಿಟ್ಟುಕೊಟ್ಟರು. ಆದರೆ ಎರಡನೇ ಸೆಟ್ ಆರಂಭದಿಂದಲೇ ಪ್ರತಿರೋಧ ತೋರಿಸಿದ ರಿಬಾಕಿನಾ ಎದುರಾಳಿಯ ಸರ್ವ್ ಮುರಿದು 2-0 ಮುನ್ನಡೆ ಗಳಿಸಿದರು. ಆರಡಿ ಎತ್ತರದ 23 ವರ್ಷ ವಯಸ್ಸಿನ ಕಝಕಿಸ್ತಾನದ ಆಟಗಾರ್ತಿ, ಅದ್ಭುತ ಮುಂಗೈ ಹೊಡೆತಗಳ ಮೂಲಕ ತನ್ನ ಮುನ್ನಡೆಯನ್ನು 4-1ಕ್ಕೆ ಏರಿಸಿಕೊಂಡರು. ಬಳಿಕ ಸೆಟ್ ಗೆದ್ದು ಸಮಬಲ ಪ್ರದರ್ಶಿಸಿದರು.
ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್ ಆಡಿದ ರಿಬಾಕಿನಾ 2018ರಲ್ಲಿ ಕಝಕಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದರು. ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ರಷ್ಯಾ ಹಾಗೂ ಬೆಲೂರಸ್ ಆಟಗಾರರನ್ನು ವಿಂಬಲ್ಡನ್‍ನಿಂದ ಹೊರಗಿಡಲಾಗಿದೆ.