ನಾಯಕನಾಗಿ ಸತತ ಗೆಲುವು: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವತ್ತ ರೋಹಿತ್ ಶರ್ಮಾ ಚಿತ್ತ

Update: 2022-07-10 03:13 GMT
Photo:PTI

ಲಂಡನ್: ಎಜ್ ಬಾಸ್ಟನ್‌ನಲ್ಲಿ ಶನಿವಾರ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ 49 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ಈ ಗೆಲುವಿನೊಂದಿಗೆ ನಾಯಕನಾಗಿ ರೋಹಿತ್ ಸತತ 19ನೇ ಗೆಲುವು ದಾಖಲಿಸಿದರು. ಭಾರತವು ರವಿವಾರ(ಜುಲೈ 10)   3ನೇ ಪಂದ್ಯವನ್ನು ಜಯಿಸಿ  ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ  2003 ರಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ನಿರ್ಮಿಸಿದ್ದ ಸತತ  20 ಗೆಲುವಿನ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗುತ್ತದೆ. ಪಾಂಟಿಂಗ್   ಅಂತರರಾಷ್ಟ್ರೀಯ ನಾಯಕನಾಗಿ ಸತತವಾಗಿ ಜಯ ಗಳಿಸಿದ ಸಾಧನೆ ಮಾಡಿದ್ದಾರೆ.

ರೋಹಿತ್ ಈಗಾಗಲೇ ಟ್ವೆಂಟಿ-20 ನಾಯಕನಾಗಿ ಅತ್ಯಂತ  ಹೆಚ್ಚು ಸತತ ಜಯಗಳ(14)  ದಾಖಲೆಯೊಂದಿಗೆ ಮುನ್ನಡೆ ಸಾಧಿಸಿದ್ದಾರೆ. 2019 ರಲ್ಲಿ ಅವರು ಬಾಂಗ್ಲಾದೇಶದ ವಿರುದ್ಧ ಭಾರತವನ್ನು ಮುನ್ನಡೆಸಿದಾಗ ಈ ಗೆಲುವಿನ ಸರಣಿಯು ಆರಂಭವಾಯಿತು. ಎಲ್ಲಾ ಸ್ವರೂಪಗಳ ಪಂದ್ಯಗಳಲ್ಲಿ ರೋಹಿತ್ ಈಗ ನಾಯಕನಾಗಿ ಸತತ 19 ಗೆಲುವುಗಳನ್ನು ಸಾಧಿಸಿದ್ದಾರೆ, ಅದರಲ್ಲಿ 14 ಟ್ವೆಂಟಿ-20 ಪಂದ್ಯಗಳು ಸೇರಿವೆ.

ವಿರಾಟ್ ಕೊಹ್ಲಿ ಟ್ವೆಂಟಿ-20 ನಾಯಕತ್ವದಿಂದ ಕೆಳಗಿಳಿದ ನಂತರ ಹಾಗೂ  ಕಳೆದ ವರ್ಷ ಏಕದಿನ ನಾಯಕತ್ವದಿಂದ ವಜಾಗೊಂಡ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಅವರನ್ನು ಸೀಮಿತ ಓವರ್ ಕ್ರಿಕೆಟ್  ನಾಯಕರನ್ನಾಗಿ ನೇಮಿಸಿತು. 2022 ರ ಜನವರಿಯಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವ ತ್ಯಜಿಸಿದ ನಂತರ ರೋಹಿತ್‌ಗೆ ಟೆಸ್ಟ್ ತಂಡದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News