21ನೇ ಗ್ರ್ಯಾಂಡ್‍ಸ್ಲಾಂ ಗೆದ್ದ ಜೋಕೊವಿಕ್‍ಗೆ ಏಳನೇ ವಿಂಬಲ್ಡನ್ ಕಿರೀಟ

Update: 2022-07-11 02:17 GMT
Photo: twitter.com/DjokerNole

ಲಂಡನ್: ನೊವಾಕ್ ಜೋಕೊವಿಕ್ ಅವರು ಏಳನೇ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ವೃತ್ತಿಜೀವನದ 21ನೇ ಗ್ರ್ಯಾಂಡ್‍ಸ್ಲಾಂ ಗೆದ್ದ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಫೈನಲ್‍ನಲ್ಲಿ ನಾಲ್ಕು ಸೆಟ್‍ಗಳ ಹೋರಾಟದಲ್ಲಿ ನಿಕ್ ಕಿರ್ಗೋಸ್ ಅವರನ್ನು 4-6, 6-3, 6-4, 7-6 (7/3) ಅಂತರದಿಂದ ಸೋಲಿಸಿ, ಪೀಟ್ ಸಾಂಪ್ರಾಸ್ ಅವರ ಏಳು ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟಿದರು. ರೋಜರ್ ಫೆಡರರ್ ಎಂಟು ಬಾರಿ ವಿಂಬಲ್ಡನ್ ಗೆದ್ದಿರುವುದು ಇದುವರೆಗಿನ ದಾಖಲೆಯಾಗಿದೆ.

ಮೊದಲ ಸೆಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಿರ್ಗೋಸ್ ವಿರುದ್ಧ ಮುಂದಿನ ಸೆಟ್‍ಗಳಲ್ಲಿ ಜೋಕೊವಿಕ್ ಕೈ ಮೇಲಾಯಿತು. 35 ವರ್ಷ ವಯಸ್ಸಿನ ಸೆರ್ಬಿಯನ್ ಆಟಗಾರ, ಒಟ್ಟು ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಯಲ್ಲಿ ಫೆಡರರ್ ಅವರಿಗಿಂತ ಮುಂದಿದ್ದು, ರಫೇಲ್ ನಡಾಲ್ ಅವರ ಸರ್ವಾಧಿಕ 22 ಗ್ರ್ಯಾಂಡ್‍ಸ್ಲಾಂಗಳ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಪ್ರಶಸ್ತಿ ಗಳಿಸಬೇಕಾಗಿದೆ.

ಸತತ ನಾಲ್ಕು ವಿಂಬಲ್ಡನ್ ಗೆದ್ದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೂ ಜೋಕೊವಿಕ್ ಪಾತ್ರರಾದರು. ಫೆಡರರ್, ಸಾಂಪ್ರಾಸ್ ಮತ್ತು ಬೋರ್ನ್ ಬೋರ್ಗ್ ಈ ಮುನ್ನ ಈ ಸಾಧನೆ ಮಾಡಿದ್ದರು. 32ನೇ ಗ್ರ್ಯಾಂಡ್‍ಸ್ಲಾಂ ಫೈನಲ್ ಆಡಿದ ಜೊಕೊವಿಕ್ 27 ವರ್ಷದ ಎದುರಾಳಿಯ ಮೊದಲ ಪ್ರಶಸ್ತಿಯ ಕನಸು ನುಚ್ಚುನೂರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News