ಪ್ಯಾರಾಸಿನ್ ಓಪನ್ ಚೆಸ್ ಪ್ರಶಸ್ತಿ ಜಯಿಸಿದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ
ಹೊಸದಿಲ್ಲಿ: ಸೆರ್ಬಿಯಾದಲ್ಲಿ ಶನಿವಾರ ನಡೆದ ಪ್ಯಾರಾಸಿನ್ ಓಪನ್ 'ಎ' ಚೆಸ್ ಟೂರ್ನಮೆಂಟ್ 2022 ರಲ್ಲಿ ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಒಂಬತ್ತು ಸುತ್ತುಗಳಿಂದ 8 ಅಂಕಗಳನ್ನು ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
16 ವರ್ಷ ವಯಸ್ಸಿನ ಪ್ರಜ್ಞಾನಂದ ಅಜೇಯರಾಗಿ ಉಳಿದರು. ಅಲೆಕ್ಸಾಂಡರ್ ಪ್ರೆಡ್ಕೆ ಅವರು 7.5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಲಿಶರ್ ಸುಲೇಮೆನೋವ್ ಮತ್ತು ಭಾರತದ ಎ.ಎಲ್. ಮುತ್ತಯ್ಯ ತಲಾ 7 ಅಂಕ ಗಳಿಸಿದರು. ಸುಲೇಮೆನೋವ್ ಉತ್ತಮ ಟೈ-ಬ್ರೇಕ್ ಸ್ಕೋರ್ ಆಧಾರದ ಮೇಲೆ ಮೂರನೇ ಸ್ಥಾನವನ್ನು ಪಡೆದರು.
ಭಾರತದ ಜಿಎಂ ಅರ್ಜುನ್ ಕಲ್ಯಾಣ್ (6.5 ಅಂಕ) ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಒಲಿಂಪಿಯಾಡ್‌ಗೆ ತೆರಳಲಿರುವ ಪ್ರಜ್ಞಾನಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರೆಡ್ಕೆ ಏಳನೇ ಸುತ್ತಿನಲ್ಲಿ ಡ್ರಾ ಸಾಧಿಸುವ ಮೊದಲು ಪ್ರಜ್ಞಾನಂದ ತಮ್ಮ ಮೊದಲ ಆರು ಪಂದ್ಯಗಳನ್ನು ಗೆದ್ದುಕೊಂಡರು. ನಂತರ ಅವರು ಒಂಬತ್ತನೇ ಹಾಗೂ ಅಂತಿಮ ಸುತ್ತಿನಲ್ಲಿ ಅಲಿಶರ್ ಸುಲೇಮೆನೋವ್ (ಕಝಕಿಸ್ತಾನ್) ವಿರುದ್ಧ ಡ್ರಾ ಸಾಧಿಸುವ ಮೊದಲು ಎಂಟನೇ ಸುತ್ತಿನಲ್ಲಿ ತಮ್ಮದೇ ದೇಶದ ಜಿಎಂ ಅರ್ಜುನ್ ಕಲ್ಯಾಣ್ ಅವರನ್ನು ಸೋಲಿಸಿದರು.