×
Ad

ಬೈಕ್ ರೇಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಬಾಲಕಿ

Update: 2022-07-17 11:08 IST

ಬೆಂಗಳೂರಿನ ಅಲೀನಾ ಮನ್ಸೂರ್ ಶೇಖ್ ಬೈಕ್ ರೇಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಬಾಲಕಿ. ಏಳನೇ ತರಗತಿಯಲ್ಲಿ ಓದುತ್ತಿರುವ ಅವರಿಗೆ ಈಗ ಕೇವಲ 12 ವರ್ಷ. ಆದರೆ, ಬೈಕ್ ರೇಸ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ.

ಅವರು ಈಗಾಗಲೇ ಬೈಕ್ ರೇಸ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ 30ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದದ್ದಾರೆ. ಈಗ ಅವರು ಭಾರತದಲ್ಲಿ ನಡೆಯಲಿರುವ ಮಿನಿ ಜಿಪಿ ವಿಶ್ವ ಸರಣಿಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯು ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಜುಲೈ 23ರಿಂದ ಸೆಪ್ಟಂಬರ್ 25ರವರೆಗೆ ನಡೆಯಲಿದೆ.

ಅಲೀನಾ ತನ್ನ ಒಂಭತ್ತನೇ ವಯಸ್ಸಿನಲ್ಲೇ, ಅಂದರೆ 2019ರಲ್ಲಿ ಬೈಕ್ ರೇಸ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಆ ವರ್ಷ ಅವರು ಎಮ್‌ಆರ್‌ಎಫ್ ನ್ಯಾಶನಲ್ ಚಾಂಪಿಯನ್‌ಶಿಪ್‌ನ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಮೊದಲನೆಯ ಸ್ಪರ್ಧೆ ಕೊಯಂಬತ್ತೂರ್‌ನಲ್ಲಿ ನಡೆಯಿತು. ಅದು ಅವರ ಚೊಚ್ಚಲ ಸ್ಪರ್ಧೆಯಾಯಿತು. ಅದರಲ್ಲಿ ಐದನೇ ಸ್ಥಾನ ಪಡೆದರು. ಬಳಿಕ, ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ರೇಸ್‌ನಲ್ಲಿ ಸ್ಪರ್ಧಿಸಿದರು. ಅಲ್ಲೂ 5ನೇ ಸ್ಥಾನ ಗಳಿಸಿದರು.

ಹುಡುಗರ ಕ್ಷೇತ್ರಕ್ಕೆ ಲಗ್ಗೆ

ಹೇಳಿಕೇಳಿ ಬೈಕ್ ರೇಸ್ ಎನ್ನುವುದು ಹುಡುಗರ ಕ್ಷೇತ್ರ. ಅಲ್ಲಿಗೆ ಅಲೀನಾ ಪ್ರವೇಶಿಸಿದ್ದು ಹೇಗೆ? ಯಾವ ಸಾಧನೆಗೂ ಒಂದು ಹಿನ್ನೆಲೆಯಿರುವಂತೆ ಅಲೀನಾ ಸಾಧನೆಗೂ ಹಿನ್ನೆಲೆಯಿದೆ.

ಬೈಕ್ ರೇಸ್‌ನ ಮೂಲ ಅಲೀನಾ ಕುಟುಂಬದಲ್ಲೇ ಇದೆ. ಅವರ ತಂದೆ ಮನ್ಸೂರ್ ಸ್ಪೋರ್ಟ್ಸ್ ಬೈಕ್‌ಗಳ ಅಭಿಮಾನಿಯಾಗಿದ್ದರು. ಅವರಲ್ಲಿ ಒಂದು ಸ್ಪೋರ್ಟ್ಸ್ ಬೈಕ್ ಕೂಡಾ ಇತ್ತು. ಒಂಭತ್ತು ವರ್ಷದ ಮಗಳನ್ನು ಅದರಲ್ಲಿ ಕುಳ್ಳಿರಿಸಿಕೊಂಡು ಅವರು ಸವಾರಿ ಮಾಡುತ್ತಿದ್ದರು. ಇದುವೇ ಬೈಕ್ ರೇಸ್‌ಗೆ ಅಲೀನಾಗೆ ಪ್ರೇರಣೆಯಾಯಿತು.

C- ‘‘ನನ್ನ ಅಪ್ಪನ ಹತ್ತಿರ 800 ಎಂಬ ಸೂಪರ್ ಬೈಕ್ ಇತ್ತು. ಅಪ್ಪ ನನ್ನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ನನಗೂ ಬೈಕ್ ಓಡಿಸಬೇಕೆಂದು ಆಸೆಯಿತ್ತು. ಅಪ್ಪನಿಗೆ ಹೇಳಿದೆ- ನನಗೂ ಒಂದು ಬೈಕ್ ಬೇಕು, ನಾನೂ ಬೈಕ್ ಓಡಿಸಬೇಕು ಅಂತ. ಅಪ್ಪ ನನಗೆ ಬೇಕಾದ ಎಲ್ಲವನ್ನೂ ಒದಗಿಸಿದರು. ಅವರ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಯಿತು’’ ಎಂದು ಅಲೀನಾ ಹೇಳುತ್ತಾರೆ.

ಒಂಭತ್ತನೇ ವರ್ಷದಲ್ಲಿ ಬೈಕ್ ರೇಸ್‌ನ ಕನಸು ಕಂಡಿರುವ ಅಲೀನಾಗೆ ಆಗ ಸೈಕಲ್ ಸವಾರಿಯೂ ಗೊತ್ತಿರಲಿಲ್ಲ. ನಂತರದ್ದು ಸಾಧನೆಯ ಕತೆ.

2022ರ ಸಾಲಿನ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಅಲೀನಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಸಿಕ್‌ನಲ್ಲಿ ನಡೆದ ಈ ವರ್ಷದ ಮೊದಲ ಸ್ಪರ್ಧೆಯಲ್ಲಿ ಅವರು ದ್ವಿತೀಯ ಸ್ಥಾನಿಯಾಗಿದ್ದರು. ಪುಣೆಯಲ್ಲಿ ನಡೆದ ಎರಡನೇ ಸ್ಪರ್ಧೆಯಲ್ಲಿ ಅವರ ಬೈಕ್ ಕೆಟ್ಟು ಹೋಯಿತು. ಹಾಗಾಗಿ ಅಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಜೂನ್‌ನಲ್ಲಿ ಕೊಯಂಬತ್ತೂರ್‌ನಲ್ಲಿ ನಡೆದ ಮೂರನೇ ರೇಸ್‌ನಲ್ಲಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಗ ಮಿನಿ ಜಿಪಿ ವಿಶ್ವ ಸರಣಿಯಲ್ಲಿ ತನ್ನ ಬೈಕ್ ಚಲಾವಣೆಯ ನೈಪುಣ್ಯ ಪ್ರದರ್ಶಿಸಲು ಸಿದ್ಧತೆ ನಡೆಸುತ್ತಿದ್ದಾರೆ.

50-60 ಲಕ್ಷ ರೂಪಾಯಿ ಖರ್ಚು

ಬೈಕ್ ರೇಸ್ ಎನ್ನುವುದು ದುಬಾರಿ ಕ್ರೀಡೆ. ತನ್ನ ಮಗಳ ಬೈಕ್ ರೇಸ್‌ಗಾಗಿ ಮನ್ಸೂರ್ ಈಗಾಗಲೇ 50-60 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಅವರು ತನ್ನ ಮಗಳಿಗೆ ಮೊದಲು ಖರೀದಿಸಿದ ಕವಾಸಕಿ ಬೈಕ್‌ನ ಬೆಲೆ ಸುಮಾರು ಮೂರು ಲಕ್ಷ ರೂಪಾಯಿ. ಬಳಿಕ ದುಬಾರಿ ಬೆಲೆಯ ಕೆಟಿಎಮ್-50 ಬೈಕ್ ಕೊಡಿಸಿದರು.

‘‘ಮಗಳು ಬೆಳೆಯುತ್ತಿರುವಂತೆಯೇ, ಎರಡು ವರ್ಷಗಳಿಗೊಮ್ಮೆ ಬೈಕನ್ನು ಕೂಡ ಮೇಲ್ದರ್ಜೆಗೇರಿಸುತ್ತಾ ಹೋಗಬೇಕಾಗುತ್ತದೆ’’ ಎನ್ನುವ ಮನ್ಸೂರ್ ‘‘ಮಗಳು ಒಮ್ಮೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದರೆ ನಾವು ಪಟ್ಟ ಪರಿಶ್ರಮ ಸಾರ್ಥಕವಾಗುತ್ತದೆ’’ ಎನ್ನುತ್ತಾರೆ.

‘‘ನಾನು ಮತ್ತು ಪತ್ನಿ ಸುಮಯ್ಯಿ ಮಕ್ಕಳನ್ನು ಗಂಡು-ಹೆಣ್ಣೆಂಬ ಭೇದಭಾವವಿಲ್ಲದೆ ಬೆಳೆಸಿದ್ದೇವೆ. ನಮ್ಮ ಮಕ್ಕಳು ಧೈರ್ಯವಂತರಾಗಿ ಆತ್ಮವಿಶ್ವಾಸದಿಂದ ಬದುಕಲು ಕಲಿಸುತ್ತಿದ್ದೇವೆ’’ ಎಂದು ಮನ್ಸೂರ್ ಹೇಳುತ್ತಾರೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News