ಒಪೆಕ್ ಸಹಕಾರವಿಲ್ಲದೆ ಸಾಕಷ್ಟು ತೈಲ ಪೂರೈಕೆ ಸಾಧ್ಯವಿಲ್ಲ: ಸೌದಿ ಅರೆಬಿಯಾ

Update: 2022-07-19 17:40 GMT

 ಟೋಕಿಯೊ, ಜು.19: ರಶ್ಯವು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಮತ್ತದರ ಮಿತ್ರರಾಷ್ಟ್ರಗಳ ಸಂಘಟನೆ (ಒಪೆಕ್ +)ಯ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿರುವ ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಯುವರಾಜ ಫೈಸಲ್ ಬಿನ್ ಫರ್ಹಾನ್, ಒಪೆಕ್ನ ಸಹಕಾರವಿಲ್ಲದೆ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದ ತೈಲ ಪೂರೈಕೆ ಸಾಧ್ಯವಾಗದು ಎಂದಿದ್ದಾರೆ.

 ಜಪಾನ್ನ ಟೋಕಿಯೋದಲ್ಲಿ ಮಂಗಳವಾರ ನಡೆದ ‘ಅರಬ್ ನ್ಯೂಸ್’ ಜಪಾನ್ ದುಂಡುಮೇಜಿನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಪೆಕ್ + ಮೂಲಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಾವು ಆದ್ಯತೆ ನೀಡುತ್ತೇವೆ. ಒಪೆಕ್ನೊಳಗಿನ ಸಂವಾದವು ಸಾಕಷ್ಟು ದೃಢವಾಗಿದೆ ಮತ್ತು ತೈಲ ಮಾರುಕಟ್ಟೆಯ ಅಗತ್ಯಗಳಿಗೆ ಅನುಸಾರ ಪ್ರತಿಕ್ರಿಯಿಸುತ್ತಿದೆ.

ಮಾರುಕಟ್ಟೆಯಲ್ಲಿ ತೈಲದ ಕೊರತೆಯಿದೆ ಎಂದು ನಮಗೆ ಅನಿಸುವುದಿಲ್ಲ, ತೈಲ ಸಂಸ್ಕರಿಸುವ ಸಾಮರ್ಥ್ಯದ ಕೊರತೆಯಿದೆ ಎಂದರು. ಇತ್ತೀಚೆಗೆ ಹತ್ಯೆಯಾದ ಜಪಾನ್ ಮಾಜಿ ಪ್ರಧಾನಿ ಶಿಂಝೊ ಅಬೆಯವರಿಗೆ ಗೌರವ ಸಲ್ಲಿಸಿದ ಫೈಸಲ್ ಬಿನ್ ಫರ್ಹಾನ್, ಸೌದಿ-ಜಪಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News