ಮಕ್ಕಾ ಪ್ರವೇಶಿಸಿದ ಇಸ್ರೇಲ್ ಪತ್ರಕರ್ತ :ವ್ಯಾಪಕ ಆಕ್ರೋಶದ ಬಳಿಕ ಕ್ಷಮೆ ಯಾಚನೆ

Update: 2022-07-20 17:50 GMT

ರಿಯಾದ್, ಜು.20: ಮುಸ್ಲಿಮರ ಪವಿತ್ರಸ್ಥಳ ಮಕ್ಕಾಗೆ ಮುಸ್ಲಿಮೇತರರಿಗೆ ಪ್ರವೇಶಕ್ಕೆ ಇರುವ ನಿಷೇಧವನ್ನು ಉಲ್ಲಂಘಿಸಿದ ಇಸ್ರೇಲ್ ಪತ್ರಕರ್ತನ ವಿರುದ್ಧ ಆನ್ಲೈನ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣ ಪ್ರಗತಿ ಪಥದಲ್ಲಿರುವ ಇಸ್ರೇಲ್ ಮತ್ತು ಸೌದಿ ಅರೆಬಿಯಾ ನಡುವಿನ ಸಂಬಂಧಕ್ಕೆ ಧಕ್ಕೆ ತರಬಹುದು ಎಂದು ವರದಿಯಾಗಿದೆ.

ಇಸ್ರೇಲ್ ನ ಚಾನೆಲ್ 13 ನ್ಯೂಸ್ ಟಿವಿ ವಾಹಿನಿ ಸೋಮವಾರ ಪ್ರಸಾರ ಮಾಡಿದ 10 ನಿಮಿಷದ ವರದಿಯಲ್ಲಿ ಪತ್ರಕರ್ತ ಗಿಲ್ ಟ್ಯಮಾರಿ ಗ್ರಾಂಡ್ ಮಸೀದಿಯನ್ನು ದಾಟಿ ಮುಂದುವರಿಯುವುದು ಮತ್ತು ‘ಮೌಂಟ್ ಆಫ್ ಮರ್ಸಿ’ಯ ಮೇಲೇರುವ ದೃಶ್ಯವಿದೆ. ಜತೆಗಿದ್ದ ಸ್ಥಳೀಯ ಗೈಡ್ ಜತೆ ಮೆಲುಧ್ವನಿಯಲ್ಲಿ ಮಾತನಾಡುವುದು ಮತ್ತು ಕ್ಯಾಮೆರಾದ ಎದುರು ಇಂಗ್ಲಿಷ್ ನಲ್ಲಿ ಮಾತನಾಡುವ ಮೂಲಕ ತಾನು ಇಸ್ರೇಲಿನ ಪ್ರಜೆ ಎಂಬುದನ್ನು ಮರೆಮಾಚಲು ಪ್ರಯತ್ನಿಸಿದ್ದಾನೆ. ಜತೆಗಿರುವ ಗೈಡ್ ನ ಮುಖವನ್ನು ವೀಡಿಯೊದಲ್ಲಿ ಮಸುಕುಗೊಳಿಸಿ ಗುರುತು ಸಿಗದಂತೆ ಮಾಡಲಾಗಿದೆ. ಇದೊಂದು ‘ಸ್ಕೂಪ್’ ವರದಿ ಎಂದು ಟಿವಿ ವಾಹಿನಿ ಹೇಳಿಕೊಂಡಿದ್ದು ವಾರ್ಷಿಕ ಹಜ್ ಯಾತ್ರೆಯ ವೀಡಿಯೊ ಚಿತ್ರೀಕರಣ ಮಾಡಿದ ಪ್ರಪ್ರಥಮ ಯೆಹೂದಿ ಇಸ್ರೇಲ್ ಪತ್ರಕರ್ತ ಎಂದು ಬಣ್ಣಿಸಿದೆ.

ಈ ವೀಡಿಯೊ ಪ್ರಸಾರವಾಗುತ್ತಿದ್ದಂತೆಯೇ ಆನ್ಲೈನ್ ನಲ್ಲಿ ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾಗಿದ್ದು ‘ಮಕ್ಕಾದ ಗ್ರಾಂಡ್ ಮಸೀದಿಯಲ್ಲಿ ಓರ್ವ ಯೆಹೂದಿ’ ಎಂಬ ಟ್ವಿಟರ್ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಆಗಿದೆ. ಇಸ್ರೇಲ್ ನಲ್ಲಿರುವ ನನ್ನ ಆತ್ಮೀಯ ಮಿತ್ರರೇ, ನಿಮ್ಮ ಪತ್ರಕರ್ತರೊಬ್ಬರು ಇಸ್ಲಾಮ್ ನ ಪವಿತ್ರ ನಗರ ಮಕ್ಕಾವನ್ನು ಪ್ರವೇಶಿಸಿ ಅಲ್ಲಿ ನಾಚಿಕೆಯಿಲ್ಲದೆ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ’ ಎಂದು ಇಸ್ರೇಲ್ ಪರವಾಗಿರುವ ಸೌದಿಯ ಕಾರ್ಯಕರ್ತ ಮುಹಮ್ಮದ್ ಸೌದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಧರ್ಮಕ್ಕೆ ನೋವುಂಟು ಮಾಡಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಚಾನೆಲ್ 13, ನೀವೊಬ್ಬ ಒರಟ. ನಿಮ್ಮ ಪತ್ರಕರ್ತನ ವರದಿ ಇಸ್ರೇಲ್-ಗಲ್ಫ್ ಸ್ನೇಹಸಂಬಂಧಕ್ಕೆ ಮೂರ್ಖ ಮತ್ತು ಹಾನಿಕಾರಕ. ರೇಟಿಂಗ್ ಗಾಗಿ ಇಂತಹ ವರದಿ ಪ್ರಸಾರ ಮಾಡುವುದು ಬೇಜವಾಬ್ದಾರಿಯ ಮತ್ತು ಹಾನಿಯುಂಟು ಮಾಡುವ ಕೃತ್ಯವಾಗಿದೆ ಎಂದು ಇಸ್ರೇಲ್ ನ ಪ್ರಾದೇಶಿಕ ಸಹಕಾರ ಸಚಿವ ಎಸಾವಿ ಫ್ರೆಜಿ ಖಂಡಿಸಿದ್ದಾರೆ.

ಕ್ಷಮೆ ಯಾಚನೆ: ವರದಿಗೆ ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಗಿಲ್ ಟ್ಯಮಾರಿ ಕ್ಷಮೆ ಯಾಚಿಸಿದ್ದಾರೆ. ಮುಸ್ಲಿಮರಿಗೆ ನೋವುಂಟು ಮಾಡುವುದು ತನ್ನ ಉದ್ದೇಶವಾಗಿಲ್ಲ. ಈ ವೀಡಿಯೊ ಯಾರದ್ದಾದರೂ ಮನಸ್ಸನ್ನು ನೋಯಿಸಿದ್ದರೆ ತೀವ್ರವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಸಂಪೂರ್ಣ ಪ್ರಯತ್ನದ ಉದ್ದೇಶ ಮಕ್ಕಾದ ಪ್ರಾಮುಖ್ಯತೆ ಮತ್ತು ಧರ್ಮದ ಸೌಂದರ್ಯವನ್ನು ಪ್ರದರ್ಶಿಸುವುದಾಗಿದೆ ಮತ್ತು ಹಾಗೆ ಮಾಡುವ ಮೂಲಕ ಹೆಚ್ಚು ಧಾರ್ಮಿಕ ಸಹಿಷ್ಣುತೆಯನ್ನು ಬೆಳೆಸುವುದಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News