×
Ad

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍; ನೀರಜ್ ಛೋಪ್ರಾಗೆ ಐತಿಹಾಸಿಕ ಬೆಳ್ಳಿ

Update: 2022-07-24 08:48 IST

ಒರೆಗಾನ್ (ಅಮೆರಿಕ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಭಾರತದ ಜಾವೆಲಿನ್ ಥ್ರೋ ಸೂಪರ್‌ ಸ್ಟಾರ್ ನೀರಜ್ ಛೋಪ್ರಾ ರವಿವಾರ ಇತಿಹಾಸ ಸೃಷ್ಟಿಸಿದರು.

ಮೊದಲ ಯತ್ನದಲ್ಲಿ ಫೌಲ್ ಆದ ಛೋಪ್ರಾ ಅವರಿಂದ ಎರಡನೇ ಹಾಗೂ ಮೂರನೇ ಯತ್ನದಲ್ಲಿ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಆದರೆ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಎರಡನೇ ಸ್ಥಾನಕ್ಕೆ ಜಿಗಿದರು. ಐದನೇ ಯತ್ನದಲ್ಲಿ ಮತ್ತೆ ಫೌಲ್ ಆದರೂ ಎರಡನೇ ಸ್ಥಾನ ಕಾಪಾಡಿಕೊಂಡರು. ಛೋಪ್ರಾ ತಮ್ಮ ಎರಡನೇ ಯತ್ನದಲ್ಲಿ 82.39 ಮೀಟರ್ ಹಾಗೂ ಮೂರನೇ ಯತ್ನದಲ್ಲಿ 86.37 ಮೀಟರ್ ಎಸೆದಿದ್ದರು.

12 ಮಂದಿಯ ಪೈಕಿ ಮೊದಲನೆಯವಾಗಿ ಜಾವೆಲಿನ್ ಎಸೆದ 24 ವರ್ಷ ವಯಸ್ಸಿನ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾ ಮೊದಲ ಯತ್ನದಲ್ಲಿ ಫೌಲ್ ಆದರು. ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಗ್ರೆನೇಡಾ ಮೊದಲ ಯತ್ನದಲ್ಲೇ 90.21 ಮೀಟ‌ರ್‌ ಗಳೊಂದಿಗೆ ಅಗ್ರಸ್ಥಾನ ಪಡೆದರು. ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದ ಪೀಟರ್ಸ್ ಕೊನೆಯ ಯತ್ನದಲ್ಲಿ 90.54 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

ನೀರಜ್ ಛೋಪ್ರಾ ತಮ್ಮ ಕೊನೆಯ ಯತ್ನದಲ್ಲಿ 'ಲಕ್ಷ್ಮಣರೇಖೆ' ದಾಟಿ ಫೌಲ್ ಆದ ಕಾರಣದಿಂದ ನೆಲಕ್ಕೆ ಕೈ ಬಡಿದು ಹತಾಶೆ ವ್ಯಕ್ತಪಡಿಸಿದರು. ನೀರಜ್ ಛೋಪ್ರಾ ಅವರ ಜೀವಮಾನದ ಅತ್ಯುತ್ತಮ ಸಾಧನೆ 89.94 ಮೀಟರ್ ಆಗಿದ್ದು, ಸ್ಟಾಕ್‍ಹೋಂ ಡೈಮಂಡ್ ಲೀಗ್‍ನಲ್ಲಿ ಈ ದಾಖಲೆ ಸ್ಥಾಪಿಸಿದ್ದರು.

ಅಂಜು ಬಾಬಿ ಜಾರ್ಜ್ ಬಳಿಕ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ದಾಖಲೆಗೆ ನೀರಜ್ ಛೋಪ್ರಾ ಪಾತ್ರರಾದರು.

ಭಾರತದ ರೋಹಿತ್ ಯಾದವ್ 78.72 ಮೀಟರ್‍ನೊಂದಿಗೆ 10ನೆಯವರಾಗಿ ಸ್ಪರ್ಧೆ ಮುಗಿಸಿದರು. 88.09 ಮೀಟರ್ ಎಸೆದ ಜಾಕೋಬ್ ವಡ್ಲೆಚ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಜೂಲಿಯನ್ ವೆಬೆರ್ 86.86 ಮೀಟರ್‍ನೊಂದಿಗೆ ನಾಲ್ಕನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News