×
Ad

ಅಕ್ಷರ್ ಪಟೇಲ್ ಸಿಡಿಲಬ್ಬರದ ಬ್ಯಾಟಿಂಗ್; ಭಾರತಕ್ಕೆ ಸರಣಿ

Update: 2022-07-25 07:41 IST
(AFP Photo) 

ಪೋರ್ಟ್ ಆಫ್ ಸ್ಪೇನ್: ಅಕ್ಷರ್ ಪಟೇಲ್ ಅವರ ಸಿಡಿಲಬ್ಬರದ ಚೊಚ್ಚಲ ಅರ್ಧಶತಕ (35 ಎಸೆತಗಳಲ್ಲಿ 64)ದ ನೆರವಿನಿಂದ ಪ್ರವಾಸಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಚಕ 2 ವಿಕೆಟ್‍ಗಳ ಜಯ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.‌

ರವಿವಾರ ನಡೆದ ಪಂದ್ಯದಲ್ಲಿ 312 ರನ್‍ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಭಾರತ 38.4 ಓವರ್‌ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದ್ದಾಗ ಕ್ರೀಸ್‍ಗೆ ಬಂದ ಅಕ್ಷರ್ ಪಟೇಲ್ ಭಾರತ ತಂಡದ ಗೆಲುವಿನ ಆಸೆಗೆ ಜೀವ ತುಂಬಿದರು. ಎರಡು ಎಸೆತಗಳು ಬಾಕಿ ಇರುವಂತೆ ಭಾರತ ಗೆಲುವಿನ ನಗೆ ಬೀರಿತು.

ಕೊನೆಯ ಮೂರು ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಪಟೇಲ್, ಕೈಲ್ ಮಯೆರ್ಸ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಗಳಿಸಿಕೊಟ್ಟರು.

ಪಟೇಲ್ ಅದ್ಭುತ ಇನಿಂಗ್ಸ್ ನಲ್ಲಿ ಐದು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದರು. ದೀಪಕ್ ಹೂಡಾ (33) ಅವರ ಜತೆ ಕೇವಲ 33 ಎಸೆತಗಳಲ್ಲಿ 51 ರನ್‍ಗಳ ಜತೆಯಾಟಕ್ಕೆ ಕಾರಣರಾದರು. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ (63) ಮತ್ತು ಸಂಜು ಸ್ಯಾಮ್ಸನ್ (54) ಅರ್ಧಶತಕಗಳ ಮೂಲಕ ಭಾರತದ ಪ್ರತಿಹೋರಾಟ ಸಂಘಟಿಸಿದರು.‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ತಂಡ ಶಾಯ್ ಹೋಮ್ ಅವರ ಭರ್ಜರಿ ಶತಕ (135 ಎಸೆತಗಳಲ್ಲಿ 115 ರನ್) ಮತ್ತು ನಿಕೋಲಸ್ ಪೂರನ್ ಅವರ ಅರ್ಧಶತಕ (77 ಎಸೆತಗಳಲ್ಲಿ 74) ನೆರವಿನಿಂದ ನಿಗದಿತ 50 ಓವರ್‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 311 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News