ಮ್ಯಾನ್ಮಾರ್: 4 ಕ್ಷಿಪ್ರಕ್ರಾಂತಿ ವಿರೋಧಿ ಹೋರಾಟಗಾರರಿಗೆ ಗಲ್ಲು

Update: 2022-07-25 16:31 GMT

ಯಾಂಗನ್ (ಮ್ಯಾನ್ಮಾರ್), ಜು. 25: ಮ್ಯಾನ್ಮಾರ್ನ ಸೇನಾ ಸರಕಾರವು ನಾಲ್ವರು ಕ್ಷಿಪ್ರಕ್ರಾಂತಿ ವಿರೋಧಿ ಹೋರಾಟಗಾರರನ್ನು ಗಲ್ಲಿಗೇರಿಸಿದೆ. ದೇಶದ ಮಾಜಿ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿಯ ಆಪ್ತರೊಬ್ಬರೂ ಗಲ್ಲಿಗೇರಿಸಲ್ಪಟ್ಟವರಲ್ಲಿ ಸೇರಿದ್ದಾರೆ.

‘‘ಭೀಕರ ಹಾಗೂ ಅಮಾನವೀಯ ಭಯೋತ್ಪಾದನಾ ಕೃತ್ಯಗಳನ್ನು ಸಂಘಟಿಸಿರುವುದಕ್ಕಾಗಿ ಈ ನಾಲ್ವರು ವ್ಯಕ್ತಿಗಳನ್ನು ಗಲ್ಲಿಗೇರಿಸಲಾಗಿದೆ’’ ಎಂದು ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ ಸೋಮವಾರ ವರದಿ ಮಾಡಿದೆ.

ಸೀನಿಯರ್ ಜನರಲ್ ಮಿನ್ ಆಂಗ್ ಹಲೈಂಗ್ ನೇತೃತ್ವದಲ್ಲಿ ಮ್ಯಾನ್ಮಾರ್ ಸೇನೆಯು 2021 ಫೆಬ್ರವರಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿ ಚುನಾಯಿತ ಸರಕಾರದಿಂದ ಅಧಿಕಾರವನ್ನು ವಹಿಸಿಕೊಂಡಿತ್ತು.

ಸೇನೆಯ ವಿರುದ್ಧ ಹೋರಾಡಲು ಮಿಲಿಶಿಯಗಳಿಗೆ ನೆರವು ನೀಡಿದ್ದಾರೆ ಎಂಬ ಆರೋಪವನ್ನು ಈ ನಾಲ್ವರ ವಿರುದ್ಧ ಹೊರಿಸಲಾಗಿತ್ತು. ಜನವರಿಯಲ್ಲಿ ಅವರ ರಹಸ್ಯ ವಿಚಾರಣೆ ನಡೆದು ಮರಣ ದಂಡನೆ ವಿಧಿಸಲಾಗಿತ್ತು. ಇದರೊಂದಿಗೆ, ಮ್ಯಾನ್ಮಾರ್ನಲ್ಲಿ ದಶಕಗಳಲ್ಲೇ ಮೊದಲ ಬಾರಿಗೆ ಮರಣ ದಂಡನೆಯನ್ನು ಜಾರಿಗೊಳಿಸಿದಂತಾಗಿದೆ. ದೇಶದ ಕೊನೆಯ ಮರಣ ದಂಡನೆಗಳು 1980ರ ದಶಕದ ಕೊನೆಯಲ್ಲಿ ಜಾರಿಯಾಗಿದ್ದವು ಎಂದು ರಾಜಕೀಯ ಕೈದಿಗಳ ಸಂಘ ತಿಳಿಸಿದೆ.

‘ಕ್ರೌರ್ಯದ ಪರಮಾವಧಿ’

ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳಿಗೆ ಸೋಮವಾರ ‘ಕರಾಳ ದಿನ’ವಾಗಿದೆ ಎಂದು ಮ್ಯಾನ್ಮಾರ್ ನ ದೇಶಭ್ರಷ್ಟ ರಾಷ್ಟ್ರೀಯ ಏಕತಾ ಸರಕಾರದ ವಕ್ತಾರ ಡಾ. ಸಾಸ ಹೇಳಿದ್ದಾರೆ.

‘‘ಭಯೋತ್ಪಾದನೆಯ ಈ ಕೃತ್ಯಗಳಿಂದ ನಾವು ಸರ್ವನಾಶವಾಗಿದ್ದೇವೆ’’ ಎಂದು ‘ಅಲ್ ಜಝೀರ’ದೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಮ್ಯಾನ್ಮಾರ್ನ ಸೇನಾ ಜನರಲ್ಗಳು ಅವರ ದೇಹಗಳನ್ನು ನಾಶಪಡಿಸಬಹುದು, ಆದರೆ ಪ್ರಜಾಪ್ರಭುತ್ವದ ಈ ಹುತಾತ್ಮರ ಚಿಂತನೆಗಳನ್ನು ನಾಶಪಡಿಸಲು ಅವರಿಗೆ ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.

‘‘ಪ್ರಜಾಪ್ರಭುತ್ವ ಹೋರಾಟಗಾರರ ಮರಣ ದಂಡನೆಯಿಂದ ನಾನು ಆಕ್ರೋಶಿತನಾಗಿದ್ದೇನೆ ಮತ್ತು ಕುಂದಿ ಹೋಗಿದ್ದೇನೆ. ಈ ಅನಾಗರಿಕ ಕೃತ್ಯಗಳು ಅಂತರ್ರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಬೇಕು’’ ಎಂದು ಮ್ಯಾನ್ಮಾರ್ನಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ಸಮನ್ವಯಕಾರ ಥಾಮಸ್ ಆ್ಯಂಡ್ರೂಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News