ಪುತ್ರನಿಗೆ ಅಂತಿಮ ವಿದಾಯ ಹೇಳಲು ಅವಕಾಶ ನೀಡಿಲ್ಲ: ಗಲ್ಲಿಗೇರಿಸಲ್ಪಟ್ಟ ಮ್ಯಾನ್ಮಾರ್ ಪ್ರಜಾಪ್ರಭುತ್ವ ಹೋರಾಟಗಾರನ ತಾಯಿ

Update: 2022-07-26 07:52 GMT
 Photo Courtesy: The Irrawaddy

ಮ್ಯಾನ್ಮಾರ್:  ಜೈಲಿನಲ್ಲಿರುವ ತನ್ನ ಪುತ್ರ ಕೋ ಫ್ಯೋ ಝೇಯಾ ಥಾವ್‍ನನ್ನು ಶುಕ್ರವಾರ ಸಂಜೆ  ಯಾಂಗೋನ್ ಇನ್ಸೇನ್ ಕಾರಾಗೃಹದಿಂದ ವೀಡಿಯೋ ಲಿಂಕ್ ಮೂಲಕ ಆತನ ತಾಯಿ ಡಾವ್ ಖಿನ್ ವಿನ್ ಟಿನ್ ಮಾತನಾಡಿಸಿದಾಗ, ತನ್ನ ಪುತ್ರನನ್ನು ತಾನು ಅದೇ ಕೊನೆಯ ಬಾರಿಗೆ ನೋಡುತ್ತಿರುವುದು ಎಂದು ಆಕೆಗೆ ತಿಳಿದಿರಲಿಲ್ಲ. ಕಳೆದ ನವೆಂಬರ್ ತಿಂಗಳಿನಲ್ಲಿ ಮಗನ ಬಂಧನದ ನಂತರ ಆತನನ್ನು ಮೊದಲ ಬಾರಿಗೆ ನೋಡಿದ ಸಮಾಧಾನ ಆಕೆಗೆ ಇತ್ತು.

ಈ ವರ್ಷದ ಜನವರಿಯಲ್ಲಿ ಥಾವ್ ಮತ್ತು ಇನ್ನೋರ್ವ ಪ್ರಜಾಪ್ರಭುತ್ವ ಪರ ಹೋರಾಟಗಾರ ಕೋ ಜಿಮ್ಮಿ ಮತ್ತು ಇತರ ಇಬ್ಬರಿಗೆ ಮಿಲಿಟರಿ ಆಡಳಿತದ ವಿರುದ್ಧ ಶಸ್ತ್ರಗಳ ಮೂಲಕ ವಿರೋಧ ತೋರಿಸಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿತ್ತು.

ನಲ್ವತ್ತೊಂದು ವರ್ಷದ ಥಾವ್, ನ್ಯಾಷನಲ್ ಲೀಗ್ ಫಾರ್ ಡೆಮಾಕ್ರೆಸಿಯಿಂದ ಎರಡು ಬಾರಿ ಆಯ್ಕೆಯಾದ ಸಂಸದನಾಗಿದ್ದರು.  ಶನಿವಾರ ಅವರ ತಾಯಿಗೆ ಯಾವುದೇ ಮಾಹಿತಿ ನೀಡದೆ ಅವರನ್ನು ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

ಇದೀಗ ಅಂತ್ಯಕ್ರಿಯೆ ನಡೆಸಲು ಕೂಡ ಪುತ್ರನ ಮೃತದೇಹವನ್ನು ತನಗೆ ಹಸ್ತಾಂತರಿಸಲು ನಿರಾಕರಿಸಲಾಗಿದೆ ಎಂದು ಆಕೆ ಹೇಳುತ್ತಾರೆ. ದಿನಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಸ್ನೇಹಿತರು ತಿಳಿಸಿದರು. ಕಾರಾಗೃಹಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ಸುದ್ದಿ ನಿಜ ಎಂದರು.

ಆತನ ಕ್ಷಮಾದಾನ ಅರ್ಜಿಯನ್ನು ಎರಡು ಬಾರಿ ನಿರಾಕರಿಸಲಾಗಿರುವುದರಿಂದ ಮುಂದಿನ ಕ್ರಮಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಹೇಳಿದ್ದರು, ಆತನನ್ನು ಗಲ್ಲಿಗೇರಿಸಲಾಗುವುದೇ ಎಂದು ಕೇಳಿದಾಗ, ಮುಂಚಿತವಾಗಿಯೇ ತಿಳಿಸಲಾಗುವುದು ಎಂದಿದ್ದರು. ಆದರೆ ಹಾಗೆ ಮಾಡಿಲ್ಲ, ಶುಕ್ರವಾರ ಭೇಟಿಯಾದ ಆತ ಚೆನ್ನಾಗಿರುವಂತೆ ಕಂಡಿತ್ತು, ತನಗೆ ಪುಸ್ತಕಗಳು, ನಿಘಂಟುಗಳು ಮತ್ತು ರೀಡಿಂಗ್ ಗ್ಲಾಸ್ ತರುವಂತೆ ಹೇಳಿದ್ದ. ಆತನಗೆ ವಿದಾಯ ಹೇಳಲು ನನಗೆ ಅವಕಾಶವಿರಲಿಲ್ಲ. ಆತ ತನ್ನ ಜೀವವನ್ನು ಬಲಿದಾನಗೈದಿದ್ದಾನೆಂಬ ಬಗ್ಗೆ ನನಗೆ ಹೆಮ್ಮೆಯಿದೆ,''ಎಂದು ಆಕೆ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News