ಕಾಮನ್‌ವೆಲ್ತ್ ಗೇಮ್ಸ್: ಕನ್ನಡಿಗ ಗುರುರಾಜ ಪೂಜಾರಿಗೆ ಕಂಚು
ಲಂಡನ್, ಜು.30: ಭಾರತದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡನೇ ದಿನವಾದ ಶನಿವಾರ ಕಂಚಿನ ಪದಕವನ್ನು ಜಯಿಸಿದ್ದಾರೆ. ಈ ಮೂಲಕ 'ಕನ್ನಡ ಕುವರ' ಗುರುರಾಜ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ. ಭಾರತದ ಇನ್ನೋರ್ವ ವೇಟ್ ಲಿಫ್ಟರ್ ಸಂಕೇತ್ ಇಂದು ಬೆಳ್ಳಿ ಪದಕ ಜಯಿಸಿ ಪದಕ ಖಾತೆ ತೆರೆದಿದ್ದರು.
ಗುರುರಾಜ ಪೂಜಾರಿ ಪುರುಷರ 61 ಕೆಜಿ ತೂಕ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ ಎತ್ತಿ ಹಿಡಿದು ಕಂಚಿನ ಪದಕ ಜಯಿಸಿದರು. ಗುರುರಾಜ ತನ್ನ ಮೂರನೇ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 151 ಕೆಜಿ ತೂಕವನ್ನು ಯಶಸ್ವಿಯಾಗಿ ಎತ್ತಿ ಹಿಡಿಯುವ ಮೂಲಕ ಕಂಚನ್ನು ದೃಢಪಡಿಸಿದರು.
2018ರ ಆವೃತ್ತಿಯಲ್ಲಿ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದ 'ಕುಂದಾಪುರದ ಕುವರ' ಗುರುರಾಜ ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡನೇ ಬಾರಿ ಪದಕ ಜಯಿಸಿದ್ದಾರೆ.
ಮಲೇಶ್ಯದ ಅಝ್ನಿಲ್ ಬಿನ್ ಬಿದಿನ್ ಮುಹಮ್ಮದ್ 285 ಕೆಜಿ ಎತ್ತಿ ಹಿಡಿದು ಚಿನ್ನ ಜಯಿಸಿದರೆ, ಪಪುವಾ ನ್ಯೂಗಿನಿಯ ಲಿಫ್ಟರ್ ಮೊರಿಯಾ ಬಾರು 273 ಕೆಜಿ ಎತ್ತಿಹಿಡಿದು ಬೆಳ್ಳಿ ಪದಕ ಜಯಿಸಿದರು.