ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಜೂಡೋ ತಾರೆ ಸುಶೀಲಾ ದೇವಿಗೆ ಬೆಳ್ಳಿ

Update: 2022-08-01 17:31 GMT

  ಬರ್ಮಿಂಗ್‌ಹ್ಯಾಮ್, ಆ.1: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಫೈನಲ್‌ನಲ್ಲಿ ಸೋತಿರುವ ಭಾರತದ ಜೂಡೋ ತಾರೆ ಎಲ್.ಸುಶೀಲಾ ದೇವಿ ಬೆಳ್ಳಿ ಪದಕವನ್ನು ಜಯಿಸಿದರು.
 
27ರ ಹರೆಯದ ಮಣಿಪುರದ ಸುಶೀಲಾ ದೇವಿ ಚಿನ್ನದ ಪದಕಕ್ಕಾಗಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತಿದ್ದಾರೆ. ಈ ಮೂಲಕ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

ದೇವಿಯ ಸಾಧನೆಯೊಂದಿಗೆ ಭಾರತವು ಗೇಮ್ಸ್‌ನಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸಹಿತ 7ನೇ ಪದಕವನ್ನು ಜಯಿಸಿತು.

ಮಣಿಪುರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿರುವ ಸುಶೀಲಾ ದೇವಿ ಇದಕ್ಕೂ ಮೊದಲು ಮಲಾವಿಯ ಹ್ಯಾರಿಯೆಟ್ ಬೋನ್‌ಫೇಸ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಸೆಮಿ ಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ ಫೈನಲಿಗೆ ತಲುಪಿದ್ದರು. ಇದರೊಂದಿಗೆ ಭಾರತಕ್ಕೆ ಪದಕ ದೃಢಪಡಿಸಿದ್ದರು.

ವಿಜಯ ಕುಮಾರ್‌ಗೆ ಕಂಚು

ಪುರುಷರ 60ಕೆಜಿ ಜೂಡೊ ಸ್ಪರ್ಧೆಯಲ್ಲಿ ವಿಜಯ ಕುಮಾರ್ ಸೈಪ್ರಸ್ ಪೀಟ್ರಸ್‌ರನ್ನು 10-0 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಜಯಿಸಿದ್ದಾರೆ.

ವಿಜಯ ಕುಮಾರ್ ಸ್ಕಾಟ್ಲೆಂಡ್‌ನ ಡೈಲಾನ್ ಮುನ್ರೊ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕದ ಸುತ್ತಿಗೆ ತೇರ್ಗಡೆಯಾಗಿದ್ದರು.
  
2018 ಹಾಗೂ 2019ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಗೆದ್ದಿರುವ 26ರ ಹರೆಯದ ಯಾದವ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಜೋಶುವಾ ಕಾಟ್ಝ್ ವಿರುದ್ಧ ಸೋತಿದ್ದಾರೆ. ಆದರೆ ರಿಪಿಚೇಜ್‌ನಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದಾರೆ.

ಪುರುಷರ 66 ಕೆಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಫಿನ್ಲೆ ಅಲನ್ ವಿರುದ್ಧ ಎರಡೂವರೆ ನಿಮಿಷದೊಳಗೆ ಸೋತಿರುವ ಜಸ್ಲೀನ್ ಸಿಂಗ್ ಸೈನಿ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಆಸ್ಟ್ರೇಲಿಯದ ನಾಥನ್ ಕಾಟ್ಝ್ ವಿರುದ್ಧ ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಸುತ್ತಿನಲ್ಲಿ ಸ್ಪರ್ಧಿಸಲಿರುವ 24ರ ವಯಸ್ಸಿನ ಸೈನಿಗೆ ಪದಕ ಗೆಲ್ಲುವ ಅವಕಾಶ ಇದೆ.

ಭಾರತವು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿದ್ದು, ಇದು ಜುಡೋ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಪ್ರದರ್ಶನವಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News