ಇದಿನ್ನೂ ಆರಂಭದ ದಿನಗಳು : ರಿಷಿ ಸುನಾಕ್

Update: 2022-08-03 17:47 GMT

ಲಂಡನ್, ಆ.3: ಬ್ರಿಟನ್‌ನ ನೂತನ ಪ್ರಧಾನಿಯ ಬಗ್ಗೆ ಖಚಿತವಾಗಿ ಈಗ ಏನನ್ನೂ ಹೇಳಲಾಗದು. ಇವಿನ್ನೂ ಆರಂಭದ ದಿನಗಳು ಎಂದು ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿರುವ ಬ್ರಿಟನ್‌ನ ಮಾಜಿ ಸಚಿವ ರಿಷಿ ಸುನಾಕ್ ಹೇಳಿದ್ದಾರೆ. ಜನಾಭಿಪ್ರಾಯ ಸಮೀಕ್ಷೆಯಲ್ಲಿ ಸುನಾಕ್ ತನ್ನ ಪ್ರತಿಸ್ಪರ್ಧಿ ಲಿರ್ ಟ್ರೂಸ್ ಎದುರು ಹಿನ್ನಡೆ ಅನುಭವಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಇವಿನ್ನೂ ಆರಂಭದ ದಿನಗಳಷ್ಟೇ. 

ನಾನಿನ್ನೂ ಹಲವು ಸದಸ್ಯರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಬೇಕಿದೆ’ ಎಂದಿದ್ದಾರೆ. ಅಂತಿಮ ಹಂತದಲ್ಲಿ ಉಳಿದಿರುವ ಸುನಾಕ್ ಮತ್ತು ಟ್ರೂಸ್‌ರಲ್ಲಿ ಒಬ್ಬರನ್ನು ಕನ್ಸರ್ವೇಟಿವ್ ಪಕ್ಷದ ಸುಮಾರು 2 ಲಕ್ಷ ಸದಸ್ಯರು ಅಂಚೆ ಮತದಾನದ ಮೂಲಕ ಆಯ್ಕೆ ಮಾಡಲಿದ್ದು ಸೆಪ್ಟಂಬರ್ 5ರಂದು ಫಲಿತಾಂಶ ಪ್ರಕಟವಾಗಲಿದೆ. ಮಂಗಳವಾರ ಪ್ರಕಟವಾದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಸುನಾಕ್ ತಮ್ಮ ಪ್ರತಿಸ್ಪರ್ಧಿ ಟ್ರೂಸ್ ಎದುರು 34 ಅಂಕಗಳಿಂದ ಹಿನ್ನಡೆ ಅನುಭವಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಸರಕಾರದ ವಾರ್ಷಿಕ ವೆಚ್ಚದಲ್ಲಿ ಕೋಟ್ಯಾಂತರ ಪೌಂಡ್‌ಗಳಷ್ಟು ಕಡಿತಗೊಳಿಸುವುದಾಗಿ ಟ್ರೂಸ್ ಮಂಗಳವಾರ ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ಮತ್ತು ಆಕ್ಷೇಪ ವ್ಯಕ್ತವಾದ ಬಳಿಕ ಬುಧವಾರ ಅವರು ಈ ಭರವಸೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸರಕಾರದ ವೆಚ್ಚ ಕಡಿತ ಮಾಡಬೇಕಿದ್ದರೆ ನರ್ಸ್, ಶಿಕ್ಷಕರ ಸಹಿತ ಸಾರ್ವಜನಿಕ ಕ್ಷೇತ್ರದ ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡಬೇಕಾಗುತ್ತದೆ, ಇದು ತೀವ್ರ ವಿರೋಧಕ್ಕೆ ಕಾರಣವಾಗಬಹುದು ಎಂದು ಆಡಳಿತ ಪಕ್ಷದ ಸದಸ್ಯರು ಮಾಹಿತಿ ನೀಡಿದ ಬಳಿಕ ಟ್ರೂಸ್ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

 ಆರಂಭಿಕ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಸುನಾಕ್‌ಗೆ ಅಂತಿಮ ಹಂತದಲ್ಲಿ ಹಿನ್ನಡೆಯಾಗಲು ಅವರು ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ವಿಷಯದಲ್ಲಿ ವಹಿಸಿದ್ದ ಪಾತ್ರ ಮತ್ತು ಸಚಿವರಾಗಿದ್ದ ಸಂದರ್ಭ ಅವರ ಕಾರ್ಯದ ಬಗ್ಗೆ ವ್ಯಕ್ತವಾದ ಟೀಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. 

ಜಾನ್ಸನ್ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಜಾನ್ಸನ್, ಕೋವಿಡ್-19 ಸಾಂಕ್ರಾಮಿಕದ ಸಂದರ್ಭ ಸರಕಾರ ಮಾಡಿದ್ದ ವೆಚ್ಚವನ್ನು ಸರಿದೂಗಿಸಲು ತೆರಿಗೆ ಹೆಚ್ಚಳ ಮಾಡಿದ್ದು ತೀವ್ರ ಟೀಕೆಗೆ ಗ್ರಾಸ ಒದಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News