ಪಾಕಿಸ್ತಾನ: 1200 ವರ್ಷ ಹಳೆಯ ಹಿಂದೂ ದೇಗುಲ ಪುನಃಸ್ಥಾಪನೆ

Update: 2022-08-04 04:56 GMT

ಲಾಹೋರ್: ಸುಧೀರ್ಘ ಕಾನೂನು ಹೋರಾಟದ ಬಳಿಕ ನಗರದಲ್ಲಿದ್ದ 1200 ವರ್ಷ ಹಳೆಯ ಹಿಂದೂ ದೇಗುಲವನ್ನು ಪುನಃಸ್ಥಾಪನೆ ಮಾಡಲಾಗಿದೆ ಎಂದು ಪಾಕಿಸ್ತಾನದ ಅಲ್ಪಸಂಖ್ಯಾತ ಪ್ರಾರ್ಥನಾ ಸ್ಥಳಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂಸ್ಥೆ ಬುಧವಾರ ಪ್ರಕಟಿಸಿದೆ.

ಅಕ್ರಮವಾಗಿ ವಶಪಡಿಸಿಕೊಂಡಿದ್ದವರನ್ನು ದೇಗುಲ ಆವರಣದಿಂದ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿರುವುದಾಗಿ ndtv.com ವರದಿ ಮಾಡಿದೆ.

ಪ್ರಖ್ಯಾತ ಅನಾರ್ಕಲಿ ಬಝಾರ್ ಸಮೀಪದ ವಾಲ್ಮೀಕಿ ಮಂದಿರವನ್ನು ಕ್ರೈಸ್ತ ಕುಟುಂಬವೊಂದರ ವಶದಿಂದ ಇವಾಕ್ಯೂ ಟ್ರಸ್ಟ್ ಪಾಪರ್ಟಿ ಬೋರ್ಡ್ (ಇಟಿಪಿಬಿ) ಪುನಃ ಸ್ವಾಧೀನಕ್ಕೆ ಪಡೆದಿದೆ. ಲಾಹೋರ್‌ ನಲ್ಲಿ ಕೃಷ್ಣ ದೇವಾಲಯದ ಜತೆಗೆ ವಾಲ್ಮೀಕಿ ಮಂದಿರ ಕಾರ್ಯ ನಿರ್ವಹಿಸುತ್ತಿರುವ ಏಕೈಕ ದೇವಾಲಯವಾಗಿದೆ.

ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದೆ ಎನ್ನಲಾದ ಕ್ರೈಸ್ತ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ಇಲ್ಲಿ ಕೇವಲ ವಾಲ್ಮೀಕಿ ಪಂಗಡದವರಿಗೆ ಮಾತ್ರ ಪೂಜೆ ಮಾಡಲು ಅವಕಾಶ ಕಲ್ಪಿಸಿತ್ತು. ಈ ದೇವಾಲಯವನ್ನು ಮಾಸ್ಟರ್‌ ಪ್ಲಾನ್‌ ಗೆ ಅನುಸಾರವಾಗಿ ಪುನರುತ್ಥಾನ ಮಾಡಲಾಗುವುದು ಎಂದು ಇಟಿಪಿಬಿ ವಕ್ತಾರ ಅಮೀರ್ ಹಶ್ಮಿ ಹೇಳಿದ್ದಾರೆ.

100ಕ್ಕೂ ಹೆಚ್ಚು ಹಿಂದೂಗಳು, ಕೆಲ ಮಂದಿ ಸಿಕ್ಖ್ ಹಾಗೂ ಕ್ರೈಸ್ತ ಮುಖಂಡರು ಇಂದು ವಾಲ್ಮೀಕಿ ಮಂದಿರದಲ್ಲಿ ಸಭೆ ನಡೆಸಿದ್ದಾರೆ. ಹಿಂದೂಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ನೈವೇದ್ಯ ಮಾಡಿದ್ದಾರೆ. ಕಬಳಿಕೆದಾರರಿಂದ ಇದನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ. 20 ವರ್ಷ ಹಿಂದೆ ಕ್ರೈಸ್ತಕುಟುಂಬ ಇದನ್ನು ಸ್ವಾಧೀನಪಡಿಸಿಕೊಂಡಿತ್ತು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News