ಸುಧೀರ್ ಗೆ ಪ್ಯಾರಾ ಪವರ್‍ಲಿಫ್ಟಿಂಗ್ ಚಿನ್ನ; ಮುರಳಿ ಶ್ರೀಶಂಕರ್ ಗೆ ಲಾಂಗ್‍ಜಂಪ್ ಬೆಳ್ಳಿ

Update: 2022-08-05 02:05 GMT
ಸುಧೀರ್ (Photo: Twitter)

ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಕ್ರೀಡಾಕೂಟ(Commonwealth Games)ದ ಪವರ್‍ಲಿಫ್ಟಿಂಗ್‍ನಲ್ಲಿ ಭಾರತದ ಸುಧೀರ್(Sudhir) ಐತಿಹಾಸಿಕ ಚಿನ್ನ ಗೆದ್ದಿದ್ದು, ಏಳನೇ ದಿನವಾದ ಗುರುವಾರ ಕೂಡಾ ಭಾರತ ಪದಕ ಬೇಟೆ ಮುಂದುವರಿಸಿದೆ.

ಏಷ್ಯನ್ ಪ್ಯಾರಾ ಗೇಮ್ಸ್ ಕಂಚಿನ ಪದಕ ವಿಜೇತ ಸುಧೀರ್ ಅವರು ಹೆವಿವೈಟ್ ಪ್ಯಾರಾ ಪವರ್‍ಲಿಫ್ಟಿಂಗ್‍ನಲ್ಲಿ 208 ಕೆಜಿಯನ್ನು ಮೊದಲ ಪ್ರಯತ್ನದಲ್ಲೇ ಎತ್ತಿದರು. ಎರಡನೇ ಪ್ರಯತ್ನದಲ್ಲಿ ಇದನ್ನು 212 ಕೆ.ಜಿ.ಗೆ ಹೆಚ್ಚಿಸಿಕೊಂಡರು. ಈ ಮೂಲಕ 134.5 ಅಂಕಗಳನ್ನು ಗಳಿಸಿ ನೂತನ ಕೂಟ ದಾಖಲೆ ಸ್ಥಾಪಿಸಿದರು.

27 ವರ್ಷದ ಸುಧೀರ್ ಪೋಲಿಯೊ ಕಾರಣದಿಂದ ಅಂಗವೈಕಲ್ಯ ಹೊಂದಿದ್ದು, ಕಾಮನ್‍ವೆಲ್ತ್ ಪ್ಯಾರಾ ಕೂಟದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದಾರೆ.
ಕಾಮನ್‍ವೆಲ್ತ್ ಕೂಟದಲ್ಲಿ ಭಾರತದ ಮುರಳಿ ಶ್ರೀಶಂಕರ್, ಪುರುಷರ ಲಾಂಗ್‍ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆಲ್ಲುವ ಮೂಲಕ ದೇಶಕ್ಕೆ ಅಥ್ಲೆಟಿಕ್ಸ್ ನಲ್ಲಿ ಎರಡನೇ ಪದಕ ತಂದುಕೊಟ್ಟರು. 23 ವರ್ಷದ ರಾಷ್ಟ್ರೀಯ ದಾಖಲೆ ವೀರ ಮುರಳಿ ತಮ್ಮ ಐದನೇ ಪ್ರಯತ್ನದಲ್ಲಿ 8.08 ಮೀಟರ್ ದೂರಕ್ಕೆ ಜಿಗಿದು ಬಹಮಸ್‍ನ ಲಖನ್ ನೈರ್ನ್ ಅವರಿಗಿಂತ ತಾಂತ್ರಿಕವಾಗಿ ಹಿಂದುಳಿದು ಎರಡನೇ ಸ್ಥಾನ ಪಡೆದರು. ನೈರ್ನ್ ಕೂಡಾ 8.08 ಮೀಟರ್ ಜಿಗಿದರೂ, ಅವರ ಎರಡನೇ ಅತ್ಯುತ್ತಮ ಜಿಗಿತ 7.98 ಮೀಟರ್ ಆಗಿತ್ತು. ಆದರೆ ಮರಳಿಯವರ ಎರಡನೇ ಅತ್ಯುತ್ತಮ ಜಿಗಿತ 7.84 ಮೀಟರ್ ಆಗಿದ್ದರಿಂದ ನೈರ್ನ್ ಚಿನ್ನದ ಪದಕಕ್ಕೆ ಭಾಜನರಾದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟ ಮೀರಾಬಾಯಿ ಚಾನು ಅಭಿಮಾನಿ

ದಕ್ಷಿಣ ಆಫ್ರಿಕಾ ಕಂಚಿಗೆ ತೃಪ್ತಿಪಟ್ಟಿತು. ಭಾರತದ ಮತ್ತೊಬ್ಬ ಪಟು ಮುಹಮ್ಮದ್ ಅನೀಸ್ ಯಾಹಿಯಾ 7.97 ಮೀಟರ್ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.

ಕಾಮನ್‍ವೆಲ್ತ್ ಕೂಟದ ಲಾಂಗ್‍ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಮುರಳಿ ಶ್ರೀಶಂಕರ್ ಪಾತ್ರರಾದರು. ಕೂಟದಲ್ಲಿ ಆಸ್ಟ್ರೇಲಿಯಾ 50 ಚಿನ್ನ, 42 ಬೆಳ್ಳಿ ಹಾಗೂ 40 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತ 5 ಚಿನ್ನ 7 ಬೆಳ್ಳಿ, 7 ಕಂಚಿನ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News