ಭಾರತ-ಆಸ್ಟ್ರೇಲಿಯ ಕಾಮನ್ ವೆಲ್ತ್ ಗೇಮ್ಸ್ ಹಾಕಿ ಸೆಮಿ ಫೈನಲ್ : ಅಂಪೈರ್ ಪಕ್ಷಪಾತ ನೀತಿಗೆ ವೀರೇಂದ್ರ ಸೆಹ್ವಾಗ್ ಆಕ್ರೋಶ

Update: 2022-08-06 07:22 GMT
(Getty Images | Twitter)

ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಹಾಕಿ ಸೆಮಿಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಆದಾಗ್ಯೂ, ಗಡಿಯಾರದ ದೋಷದಿಂದಾಗಿ ಅಂಪೈರ್‌ಗಳು ಪೆನಾಲ್ಟಿ ಶೂಟೌಟ್ ನಲ್ಲಿ ಆಸ್ಟ್ರೇಲಿಯ ಆಟಗಾರ್ತಿಗೆ ಮತ್ತೊಂದು ಅವಕಾಶ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಅಂಪೈರ್ ಗಳ ಪಕ್ಷಪಾತ ನೀತಿಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಆಂಬ್ರೋಸಿಯಾ ಮಲೋನ್ ಮೊದಲ ಪ್ರಯತ್ನದಲ್ಲಿ ಪೆನಾಲ್ಟಿಯಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ಆದರೆ ಪಂದ್ಯದ ಅಧಿಕಾರಿಗಳು ಮಲೋನ್ ಗೆ ಮತ್ತೊಂದು ಅವಕಾಶ ನೀಡಿದರು. ಮಲೋನ್ ಈ ಬಾರಿ ತನ್ನ ಸ್ಟ್ರೈಕ್ ಅನ್ನು ಗೋಲ್ ಆಗಿ ಪರಿವರ್ತಿಸಲು ಸಫಲರಾದರು.

ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅಧಿಕಾರಿಗಳ ನಿರ್ಧಾರಕ್ಕೆ ತೀಕ್ಷ್ಣವಾಗಿ  ಪ್ರತಿಕ್ರಿಯಿಸಿದ್ದಾರೆ. ನಾವು ಸೂಪರ್ ಪವರ್ ಆಗುವವರೆಗೂ ಕ್ರಿಕೆಟ್‌ನಲ್ಲಿಯೂ ಇಂತಹ ಪಕ್ಷಪಾತ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

"ಆಸ್ಟ್ರೇಲಿಯದಿಂದ ಪೆನಾಲ್ಟಿ ಮಿಸ್ ಆಗಿತ್ತು.  ಕ್ಷಮಿಸಿ ಗಡಿಯಾರ ಸ್ಟಾರ್ಟ್ ಆಗಲಿಲ್ಲ ಎಂದು ಅಂಪೈರ್ ಹೇಳುತ್ತಾರೆ. ನಾವು ಸೂಪರ್ ಪವರ್ ಆಗುವವರೆಗೂ ಕ್ರಿಕೆಟ್‌ನಲ್ಲಿ ಇಂತಹ ಪಕ್ಷಪಾತವು ಸಂಭವಿಸುತ್ತಿತ್ತು. ಹಾಕಿಯಲ್ಲೂ ನಾವು ಬೇಗನೆ ಬಲಿಷ್ಟರಾಗುತ್ತೇವೆ ಹಾಗೂ  ಎಲ್ಲಾ ಗಡಿಯಾರಗಳು ಸಮಯಕ್ಕೆ ಆರಂಭವಾಗುತ್ತವೆ. ನಮ್ಮ ಹುಡುಗಿಯರ ಬಗ್ಗೆ ಹೆಮ್ಮೆ ಇದೆ " ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ ಅಂತಿಮವಾಗಿ ಭಾರತವನ್ನು ಶೂಟೌಟ್‌ನಲ್ಲಿ 3-0 ಗೋಲುಗಳಿಂದ ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿತು ಹಾಗೂ  ಚಿನ್ನದ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ, ಕಂಚಿನ ಪದಕಕ್ಕಾಗಿ ಭಾರತವು ನ್ಯೂಝಿಲ್ಯಾಂಡ್  ವಿರುದ್ಧ ಸೆಣಸಲಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡದ ಸೆಮಿಫೈನಲ್ ಸೋಲಿನ ಸಂದರ್ಭದಲ್ಲಿ ನಡೆದ ಗಡಿಯಾರ ವಿವಾದಕ್ಕೆ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಶನಿವಾರ ಕ್ಷಮೆಯಾಚಿಸಿದೆ. ಈ  ಘಟನೆಯನ್ನು "ಸಂಪೂರ್ಣವಾಗಿ ಪರಿಶೀಲಿಸುವುದಾಗಿ" ಹೇಳಿದೆ.

"ಆಸ್ಟ್ರೇಲಿಯಾ ಹಾಗೂ  ಭಾರತ (ಮಹಿಳೆಯರು) ನಡುವಿನ ಬರ್ಮಿಂಗ್ ಹ್ಯಾಮ್ 2022 ಕಾಮನ್ವೆಲ್ತ್ ಕ್ರೀಡಾಕೂಟದ ಸೆಮಿ-ಫೈನಲ್ ಪಂದ್ಯದಲ್ಲಿ, ಪೆನಾಲ್ಟಿ ಶೂಟೌಟ್ ತುಂಬಾ ಮುಂಚೆಯೇ ತಪ್ಪಾಗಿ ಆರಂಭವಾಯಿತು.ಆಗ ಗಡಿಯಾರ ಇನ್ನೂ ಕಾರ್ಯನಿರ್ವಹಿಸಲು ಸಿದ್ಧವಾಗಿರಲಿಲ್ಲ. ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ" ಎಂದು ಎಫ್ಐಎಚ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News