ಚೀನಾದಲ್ಲಿ ಅಲ್ಪಸಂಖ್ಯಾತರನ್ನು ಜೀತದಾಳುಗಳಂತೆ ದುಡಿಸುವುದು ಮಾನವೀಯತೆ ವಿರುದ್ಧದ ಅಪರಾಧ: ವಿಶ್ವಸಂಸ್ಥೆ ಟೀಕೆ

Update: 2022-08-17 15:45 GMT

ಜಿನೆವಾ, ಆ.17: ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಅಲ್ಪಸಂಖ್ಯಾತರನ್ನು ಕೃಷಿ, ಕೈಗಾರಿಕೆ ಕ್ಷೇತ್ರಗಳಲ್ಲಿ ಜೀತದಾಳುಗಳಂತೆ ದುಡಿಸಿಕೊಳ್ಳುವ ಬಗ್ಗೆ ವಿಶ್ವಸಂಸ್ಥೆಯ ಸ್ವತಂತ್ರ ತಜ್ಞರ ವರದಿಯಲ್ಲಿ ಉಲ್ಲೇಖಿಸಿದ್ದು ಇದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟೀಕಿಸಿದ್ದಾರೆ.

ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಚೀನಾದ ಅಧಿಕಾರಿಗಳು 1 ಮಿಲಿಯನ್ಗೂ ಅಧಿಕ ಉಯಿಗರ್ ಹಾಗೂ ಇತರ ಅಲ್ಪಸಂಖ್ಯಾತ ಮುಸ್ಲಿಮರನ್ನು ಬಂಧನಲ್ಲಿರಿಸಿದ ಹಾಗೂ ಮಹಿಳೆಯರ ಸಂತಾನಶಕ್ತಿ ಹರಣ ಮಾಡಿರುವ ಬಗ್ಗೆ ಆರೋಪವಿದೆ. ಚೀನಾವು ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ನಡೆಸಿದೆ ಎಂದು ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಆದರೆ ಚೀನಾ ಇದನ್ನು ನಿರಾಕರಿಸಿದೆ.

ಆಧುನಿಕ ಗುಲಾಮಗಿರಿ ಪ್ರಕರಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟೊಮೊಯಾ ಒಬೊಕಟ ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಚೀನಾದಲ್ಲಿ ಜೀತಕಾರ್ಮಿಕ ವ್ಯವಸ್ಥೆ ನಡೆದಿರುವ ಸರಕಾರ ನಿರ್ದೇಶಿತ 2 ವಿಭಿನ್ನ ವ್ಯವಸ್ಥೆಗಳನ್ನು ಬೆಟ್ಟು ಮಾಡಿದ್ದು ಇದಕ್ಕೆ ಪೂರಕವಾಗಿ ಚಿಂತಕರ, ಎನ್ಜಿಒ ಸಂಸ್ಥೆಗಳ ಹಾಗೂ ಸಂತ್ರಸ್ತರ ಹೇಳಿಕೆ ಮತ್ತು ವರದಿಯನ್ನೂ ಒದಗಿಸಿದೆ.

ಇದರಲ್ಲಿ ಮೊದಲನೆಯದು ವೃತ್ತಿಪರ ಕೌಶಲ್ಯ ಶಿಕ್ಷಣ ಮತ್ತು ತರಬೇತಿ ಕೇಂದ್ರದ ವ್ಯವಸ್ಥೆಯಾಗಿದ್ದು ಇದರಲ್ಲಿ ಅಲ್ಪಸಂಖ್ಯಾತರನ್ನು ಕೆಲಸದ ನಿಯೋಜನೆಗೆ ಒಳಪಟ್ಟು ವಶಕ್ಕೆ ಪಡೆಯಲಾಗುತ್ತದೆ. ಮತ್ತೊಂದು ಕಾರ್ಮಿಕ ವರ್ಗಾವಣೆಯ ಮೂಲಕ ಬಡತನವನ್ನು ಕಡಿಮೆ ಮಾಡುವ ಪ್ರಯತ್ನ. ಇದರಲ್ಲಿ ಗ್ರಾಮೀಣ ಕಾರ್ಮಿಕರನ್ನು ದ್ವಿತೀಯ ಅಥವಾ ತೃತೀಯ ಕೆಲಸಕ್ಕೆ ವರ್ಗಾಯಿಸಲಾಗುತ್ತದೆ. ಈ ಕಾರ್ಯಕ್ರಮಗಳು ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿ ಅವರ ಆದಾಯವನ್ನು ಹೆಚ್ಚಿಸುವ ಸಾಧ್ಯತೆಯಿದ್ದರೂ, ಪೀಡಿತ ಸಮುದಾಯ ನಿರ್ವಹಿಸಿದ ಕೆಲಸದ ಅನೈಚ್ಛಿಕ ಸ್ವರೂಪವು ಬಲವಂತದ ದುಡಿಮೆಯ ಸೂಚಕಗಳಂತೆ ಹಲವು ಬಾರಿ ಕಂಡುಬಂದಿದೆ ಎಂದು ವಿಶೇಷ ಪ್ರತಿನಿಧಿ ಪರಿಗಣಿಸಿದ್ದಾರೆ’ ಎಂದು ವರದಿ ಹೇಳಿದೆ.

ಕಾರ್ಮಿಕರ ಮೇಲೆ ಪ್ರಯೋಗಿಸಿದ ಅಧಿಕಾರದ ಸ್ವರೂಪ ಮತ್ತು ಪ್ರಮಾಣವು(ಅವರ ಕೆಲಸದ ಮೇಲೆ ಮಿತಿಮೀರಿದ ನಿಗಾ ಇಡುವುದು, ನಿಂದನೆ ಮತ್ತು ಕೆಲಸದ ಪರಿಸ್ಥಿತಿ) ಮನುಷ್ಯತ್ವದ ವಿರುದ್ಧದ ಅಪರಾಧವಾಗಿ ಗುಲಾಮಗಿರಿಗೆ ಕಾರಣವಾಗಬಹುದು. ಈ ವಿಷಯದಲ್ಲಿ ಇನ್ನಷ್ಟು ಸ್ವತಂತ್ರ ವಿಶ್ಲೇಷಣೆಯ ಅಗತ್ಯವಿದೆ . ಇದೇ ರೀತಿಯ ಕಾರ್ಮಿಕ ವರ್ಗಾವಣೆ ಟಿಬೆಟ್ನಲ್ಲೂ ಇದೆ. ಇಲ್ಲಿ ರೈತರು, ಕುರಿಗಾಹಿಗಳು ಹಾಗೂ ಇತರ ಗ್ರಾಮೀಣ ಕಾರ್ಮಿಕರನ್ನು ಕಡಿಮೆ ಕೌಶಲ್ಯದ ಮತ್ತು ಕಡಿಮೆ ಸಂಬಳದ ಕೆಲಸಕ್ಕೆ ವರ್ಗಾಯಿಸಲಾಗಿದೆ ಎಂದು ವರದಿ ಹೇಳಿದೆ.

ಉಗ್ರವಾದವನ್ನು ಎದುರಿಸಲು ವಿನ್ಯಾಸಗೊಳಿಸಿರುವ ವೃತ್ತಿಪರ ತರಬೇತಿ ಕೇಂದ್ರಗಳನ್ನು ಕ್ಸಿಯಾನ್ಜಿಂಗ್ನಲ್ಲಿ ನಡೆಸಲಾಗುತ್ತಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News