2 ಕ್ರೂಸ್ ಕ್ಷಿಪಣಿ ಪ್ರಯೋಗಿಸಿದ ಉತ್ತರ ಕೊರಿಯಾ

Update: 2022-08-17 16:42 GMT

ಸಿಯೋಲ್, ಆ.17: ಉತ್ತರ ಕೊರಿಯಾವು ಬುಧವಾರ 2 ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು ಈ ಮೂಲಕ ಶಸ್ತ್ರಾಸ್ತ್ರ ಪ್ರಯೋಗದ ಒಂದು ತಿಂಗಳ ವಿರಾಮವನ್ನು ಮುರಿದಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ‌

ಬುಧವಾರ ಬೆಳಿಗ್ಗೆ ಉತ್ತರಕೊರಿಯಾವು ಪ್ಯಾಂಗ್ಯಾಂಗ್ ಪ್ರಾಂತದ ಪಶ್ಚಿಮದಲ್ಲಿರುವ ಓಂಚಾನ್ ಸಮುದ್ರಕ್ಕೆ 2 ಕ್ಷಿಪಣಿಯನ್ನು ಪ್ರಯೋಗಿಸಿದೆ ಎಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಕ್ಷಿಪಣಿ ಎಷ್ಟು ದೂರ ಹಾರಿದೆ ಮತ್ತಿತರ ವಿವರಗಳನ್ನು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಮಿಲಿಟರಿ ತಜ್ಞರು ವಿಶ್ಲೇಷಿಸಲಿದ್ದಾರೆ. ಜನವರಿಯಿಂದ ಉತ್ತರ ಕೊರಿಯಾ ಕ್ರೂಸ್ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿರಲಿಲ್ಲ ಎಂದು ಇಲಾಖೆ ಹೇಳಿದೆ.

ಜನವರಿಯಲ್ಲಿ ಉತ್ತರ ಕೊರಿಯಾ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಸಹಿತ ಸರಣಿ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಉತ್ತರ ಕೊರಿಯಾವು 7ನೇ ಪರಮಾಣು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ವಾರದ ಆರಂಭದಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೇನೆಯು ವಾರ್ಷಿಕ ‘ಉಲ್ಚಿ ಫ್ರೀಡಂ ಶೀಲ್ಡ್’ ಜಂಟಿ ಸಮರಾಭ್ಯಾಸಕ್ಕೂ ಮುನ್ನ ಪೂರ್ವಭಾವಿ ಅಭ್ಯಾಸಕ್ಕೆ ಚಾಲನೆ ನೀಡಿವೆ. ಇದು ತನ್ನ ಮೇಲೆ ಆಕ್ರಮಣಕ್ಕೆ ಪೂರ್ವಸಿದ್ಧತೆ ಎಂದು ಉತ್ತರ ಕೊರಿಯಾ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News