×
Ad

ಎಐಎಫ್‍ಎಫ್ ವಜಾ ಹಿನ್ನೆಲೆ: ಗೋಕುಲಂ ಕೇರಳ ತಂಡಕ್ಕೆ ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದ ಕ್ರೀಡಾ ಸಚಿವಾಲಯ

Update: 2022-08-20 16:39 IST
Photo: Twitter

ಹೊಸದಿಲ್ಲಿ: ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಅನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಎಎಫ್‍ಸಿ ವಿಮೆನ್ಸ್ ಕ್ಲಬ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲೆಂದು ಉಜ್ಬೆಕಿಸ್ತಾನಕ್ಕೆ ತೆರಳಿದ್ದ ಗೋಕುಲಂ ಕೇರಳ ಎಫ್‍ಸಿ ತಂಡಕ್ಕೆ ಸ್ವದೇಶಕ್ಕೆ ವಾಪಸಾಗುವಂತೆ ಕ್ರೀಡಾ ಸಚಿವಾಲಯ ಇಂದು ಸೂಚಿಸಿದೆ. ಇಂದೇ ಮರಳಲು ತಂಡ ವಿಮಾನ ಟಿಕೆಟ್ ಲಭ್ಯತೆಯನ್ನು ಪರಿಶೀಲಿಸುತ್ತಿದೆ ಎಂಬ ಮಾಹಿತಿಯಿದೆ.

ಮೂರನೇ ಪಕ್ಷಗಳಿಂದ ಅನಗತ್ಯ ಪ್ರಭಾವಕ್ಕಾಗಿ  ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆ ಫಿಫಾ ಭಾರತವನ್ನು ವಜಾಗೊಳಿಸಿತ್ತಲ್ಲದೆ  ನಿಗದಿಯಾದಂತೆ ಭಾರತದಲ್ಲಿ ಅಂಡರ್-16 ವಿಮೆನ್ಸ್ ವಲ್ರ್ಡ್ ಕಪ್ ನಡೆಯುವ ಹಾಗಿಲ್ಲ ಎಂದು ಹೇಳಿತ್ತು.

ದೇಶದ ಮಹಿಳಾ ತಂಡವು ಆಗಸ್ಟ್ 23 ರಂದು ಇರಾನ್ ತಂಡದ ವಿರುದ್ಧ ಹಾಗೂ ಆಗಸ್ಟ್ 26ರಂದು ಅತಿಥೇಯ ರಾಷ್ಟ್ರದ ತಂಡದ ವಿರುದ್ಧ ಪಂದ್ಯ ಆಡಬೇಕಿತ್ತು. ಎಟಿಕೆ ಮೋಹನ್ ಬಗಾನ್ ತಂಡ ಎಎಫ್‍ಸಿ ಕಪ್ 2022 ಅಂತರ್-ವಲಯ ಸೆಮಿಫೈನಲ್‍ನಲ್ಲಿ ಸೆಪ್ಟೆಂಬರ್ 7ರಂದು ಬಹರೈನ್‍ನಲ್ಲಿ ಆಡಬೇಕಿತ್ತು.

ಇತ್ತೀಚಿಗಿನ ಬೆಳವಣಿಗೆಗಳ ನಂತರ ಗೋಕುಲಂ ಕೇರಳ ತಂಡದ ಆಡಳಿತವು ಕ್ರೀಡಾ ಸಚಿವಾಲಯದ ಮಧ್ಯಪ್ರವೇಶವನ್ನು ಕೋರಿತ್ತು. ಸಚಿವಾಲಯ ಫಿಫಾ ಮತ್ತು ಎಎಫ್‍ಸಿಗೆ ಶುಕ್ರವಾರ ಇಮೇಲ್ ಕಳುಹಿಸಿ ಎಐಎಫ್‍ಎಫ್ ವಜಾಗೊಳಿಸುವ ಆದೇಶ ಹೊರಬೀಳುವ ಮುನ್ನವೇ ದೇಶದ ತಂಡ ಉಜ್ಬೆಕಿಸ್ತಾನ ತಲುಪಿತ್ತೆಂದು ತಿಳಿಸಿತ್ತಲ್ಲದೆ ಈ ಹಿನ್ನೆಲೆಯಲ್ಲಿ ತಂಡಕ್ಕೆ ಪಂದ್ಯದಲ್ಲಿ ಭಾಗವಹಿಸಲು ಅನುಮತಿ ಕೋರಿತ್ತು.

ತರುವಾಯ ಗೋಕುಲಂ ತಂಡ ಪ್ರಧಾನಿಗೂ ಟ್ವಿಟ್ಟರ್ ಮೂಲಕ ಸಹಾಯಕ್ಕಾಗಿ ಕೋರಿತ್ತು.

ಆದರೆ ಯಾವುದೇ ಸಕಾರಾತ್ಮಕ ಬೆಳವಣಿಗೆಗಳಾಗದ ಹಿನ್ನೆಲೆಯಲ್ಲಿ ಈಗ ತಂಡಕ್ಕೆ ಭಾರತಕ್ಕೆ ವಾಪಸಾಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News