ಅಫ್ಘಾನ್‌ನಲ್ಲಿ ಅಮೆರಿಕದ ಪತ್ರಕರ್ತ ಮತ್ತು ಅಫ್ಘಾನಿಸ್ತಾನದ ನಿರ್ಮಾಪಕನ ಬಂಧನ: ವರದಿ

Update: 2022-08-21 15:45 GMT
ಸಾಂದರ್ಭಿಕ ಚಿತ್ರ

 ನ್ಯೂಯಾರ್ಕ್, ಆ.21: ಅಮೆರಿಕದ ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಇವೊರ್ ಶಿಯರರ್ ಹಾಗೂ ನಿರ್ಮಾಪಕ ಫೈಝುಲ್ಲಾ ಫೈಜ್ ಭಕ್ಷ್ ರನ್ನು ಅಫ್ಘಾನಿಸ್ತಾನದಲ್ಲಿ ಆಗಸ್ಟ್ 17ರಂದು ತಾಲಿಬಾನ್ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

ಈ ತಿಂಗಳ ಆರಂಭದಲ್ಲಿ ಅಲ್‌ಖೈದಾ ಮುಖಂಡ ಅಲ್‌ಝವಾಹಿರಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದ ಕಾಬೂಲ್‌ನ  ಶೇರ್‌ಪುರ ಪ್ರದೇಶದಲ್ಲಿ ಇವರಿಬ್ಬರು ಆಗಸ್ಟ್ 17ರಂದು ಸಾಕ್ಷ್ಯಚಿತ್ರದ ಚಿತ್ರೀಕರಣ ಮಾಡುತ್ತಿದ್ದಾಗ ಹಲವು ಭದ್ರತಾ ಸಿಬಂದಿ ಅವರನ್ನು ತಡೆದರು ಎಂದು ಪತ್ರಕರ್ತರ ರಕ್ಷಣಾ ಸಮಿತಿ(ಸಿಪಿಜೆ) ಹೇಳಿದೆ.ಅವರನ್ನು ಪ್ರಶ್ನಿಸಿದ ಸಿಬಂದಿ, ಅವರ ಕೆಲಸದ ಪರ್ಮಿಟ್, ಗುರುತು ಚೀಟಿ ಮತ್ತು ಪಾಸ್‌ಪೋರ್ಟ್‌ಗಳನ್ನು ತಪಾಸಣೆ ನಡೆಸಿ ಅವರ ಮೊಬೈಲ್ ಫೋನ್‌ಗಳನ್ನು ಜಫ್ತಿ ಮಾಡಿದೆ.

ಅಮೆರಿಕದ ಗೂಢಚಾರರು ಎಂದವರನ್ನು ದೂಷಿಸಿ ತಾಲಿಬಾನ್ ಗುಪ್ತಚರ ಅಧಿಕಾರಿಗಳಿಗೆ ಕರೆ ಮಾಡಿದಾಗ ಸುಮಾರು 50 ಸಶಸ್ತ್ರ ಅಧಿಕಾರಿಗಳು ಆಗಮಿಸಿ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಸಿಪಿಜೆ ಮಾಹಿತಿ ನೀಡಿದೆ.

ಅಫ್ಘಾನ್‌ನಲ್ಲಿ ಮಾಧ್ಯಮದವರ ಮೇಲಿನ ಒತ್ತಡ ಹಾಗೂ ಪತ್ರಕರ್ತರ ಮತ್ತು ಮಾಧ್ಯಮ ಕಾರ್ಯಕರ್ತರ ಬಂಧನ ಪ್ರಕರಣ ಹೆಚ್ಚುತ್ತಿರುವುದು ಅಫ್ಘಾನಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ್ಯದ ತತ್ವಕ್ಕೆ ತಾಲಿಬಾನ್ ನ ಬದ್ಧತೆಯ ಕೊರತೆಯನ್ನುತೋರಿಸುತ್ತದೆ ಎಂದು ಸಿಪಿಜೆಯ ಕಾರ್ಯಕ್ರಮ ನಿರ್ದೇಶಕ ಕಾರ್ಲೋಸ್ ಮಾರ್ಟಿನೆರ್ ಡೆಲಾ ಸೆರ್ನಾ ಹೇಳಿದ್ದು, ತಕ್ಷಣ ಶಿಯರರ್ ಹಾಗೂ ಫೈಜ್‌ ಭಕ್ಷ್‌ ರನ್ನು ಬಿಡುಗಡೆಗೊಳಿಸಬೇಕು ಮತ್ತು ಅಫ್ಘಾನ್‌ನಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಹಸ್ತಕ್ಷೇಪ ಮತ್ತು ಒತ್ತಡವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News