ದ್ವೇಷ ಭಾಷಣದ ಆರೋಪ: ಇಮ್ರಾನ್ ಖಾನ್ ಭಾಷಣದ ನೇರಪ್ರಸಾರಕ್ಕೆ ನಿಷೇಧ

Update: 2022-08-21 16:15 GMT

 ಇಸ್ಲಮಾಬಾದ್, ಆ.21: ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಅವರ ಭಾಷಣವನ್ನು ಟಿವಿ ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡದಂತೆ ಪಾಕಿಸ್ತಾನದ ಮಾಧ್ಯಮ ನಿಗಾ ಸಮಿತಿ ನಿಷೇಧಿಸಿದೆ ಎಂದು ವರದಿಯಾಗಿದೆ.ಇಸ್ಲಮಾಬಾದ್‌ನಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಇಮ್ರಾನ್ ಸರಕಾರಿ ಸಂಸ್ಥೆಗಳು ಹಾಗೂ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಕೆಲವೇ ಘಂಟೆಗಳಲ್ಲಿ ಈ ಆದೇಶ ಹೊರಬಿದ್ದಿದೆ.

ಕಳೆದ ವಾರ ದೇಶದ್ರೋಹದ ಆರೋಪದ ಮೇಲೆ ಬಂಧಿಸಲ್ಪಟ್ಟ ತನ್ನ ಆಪ್ತ ಶಹಬಾರ್ ಗಿಲ್‌ರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಇಮ್ರಾನ್ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು, ಮಹಿಳಾ ಮ್ಯಾಜಿಸ್ಟ್ರೇಟ್, ಪಾಕಿಸ್ತಾನದ ಚುನಾವಣಾ ಆಯೋಗದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಇಮ್ರಾನ್ಖಾನ್ ಎಚ್ಚರಿಸಿದ್ದರು.ಈ ಭಾಷಣ ಹಲವು ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ‘ದಿ ಪಾಕಿಸ್ತಾನ್ ಇಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ’ (ಪಿಇಎಂಆರ್ಎ), ಪುನರಾವರ್ತಿತ ಎಚ್ಚರಿಕೆಯ ಹೊರತಾಗಿಯೂ ಟಿವಿ ಚಾನೆಲ್‌ಗಳು ಸರಕಾರಿ ಸಂಸ್ಥೆಗಳ ವಿರುದ್ಧದ ಹೇಳಿಕೆಗಳ ಪ್ರಸಾರವನ್ನು ತಡೆಯಲು ಸಮಯ-ವಿಳಂಬ ಕಾರ್ಯವಿಧಾನವನ್ನು ಅಳವಡಿಸಲು ವಿಫಲವಾಗಿವೆ ಎಂದು ಅಸಮಾಧಾನ ಸೂಚಿಸಿದೆ.

ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷ ಇಮ್ರಾನ್‌ ಖಾನ್ ತನ್ನ ಭಾಷಣ/ಹೇಳಿಕೆಗಳಲ್ಲಿ ಸರಕಾರಿ ಸಂಸ್ಥೆಗಳ ವಿರುದ್ಧ ನಿರಂತರ ಆಧಾರ ರಹಿತ ಆರೋಪ ಹೊರಿಸುತ್ತಿರುವುದು ಹಾಗೂ ಅವರ ಪ್ರಚೋದಾತ್ಮಕ ಹೇಳಿಕೆಗಳ ದ್ವೇಷ ಭಾಷಣವು ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ತಡೆಯಾಗಿದೆ ಮತ್ತು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಸಾಧ್ಯತೆಯಿದೆ. ಖಾನ್ ಅವರು ಮಾಧ್ಯಮಗಳ ನೀತಿ ಸಂಹಿತೆ ಕುರಿತ ಸಂವಿಧಾನದ ಆರ್ಟಿಕಲ್ 19 ಅನ್ನು ಉಲ್ಲಂಘಿಸಿರುವುದರಿಂದ ತಕ್ಷಣದಿಂದ ಅನ್ವಯಿಸುವಂತೆ ಅವರ ಭಾಷಣ/ ಹೇಳಿಕೆಗಳನ್ನು ಯಾವುದೇ ಟಿವಿ ಚಾನೆಲ್ಗಳಲ್ಲಿ ನೇರ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದು ಪಿಇಎಂಆರ್ಎ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News