ರಶ್ಯ ಅಧ್ಯಕ್ಷರ ಆಪ್ತನ ಪುತ್ರಿ ಕಾರ್ ಬಾಂಬ್ ಸ್ಫೋಟದಲ್ಲಿ ಮೃತ್ಯು

Update: 2022-08-21 16:33 GMT
Photo courtesy : Twitter

ಮಾಸ್ಕೋ, ಆ.21: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಅತ್ಯಂತ ಆಪ್ತನಾಗಿದ್ದ, ಪುಟಿನ್ ಅವರ ಮೆದುಳು ಎಂದೇ ಬಿಂಬಿಸಲ್ಪಟ್ಟಿರುವ ರಶ್ಯ ರಾಷ್ಟ್ರೀಯತೆಯ ಪ್ರತಿಪಾದಕ ಅಲೆಕ್ಸಾಂಡರ್ ಡ್ಯುಗಿನ್ ಅವರ ಪುತ್ರಿ ಮಾಸ್ಕೋದ ಹೊರವಲಯದಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ರವಿವಾರ ಮಾಹಿತಿ ನೀಡಿದ್ದಾರೆ.ಉಕ್ರೇನ್ ಸೇನೆ ಈ ಸ್ಫೋಟ ನಡೆಸಿದೆ ಎಂದು ಉಕ್ರೇನ್ ನಿಂದ ಪ್ರತ್ಯೇಕಗೊಂಡಿರುವ ಪ್ರದೇಶದ ಮುಖಂಡರು ಆರೋಪಿಸಿದ್ದಾರೆ.

ಡ್ಯುಗಿನ್ ರಶ್ಯ ಸರಕಾರದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲವಾದರೂ ಅಧ್ಯಕ್ಷ ಪುಟಿನ್ಗೆ ಅತ್ಯಾಪ್ತನಾಗಿರುವುದರಿಂದ ಅತ್ಯಂತ ಪ್ರಭಾವೀ ಎಂದೇ ಗುರುತಿಸಿಕೊಂಡಿದ್ದಾರೆ.ಉಕ್ರೇನ್ ವಿರುದ್ಧ ರಶ್ಯದ ಆಕ್ರಮಣವನ್ನು ಡ್ಯುಗಿನ್ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದು, ಇವರು ಬಾಂಬ್ ದಾಳಿಯ ಗುರಿಯಾಗಿರಬೇಕು ಎಂದು ಊಹಿಸಲಾಗಿದೆ. ಡ್ಯುಗಿನ್ ಪ್ರಯಾಣಿಸಬೇಕಿದ್ದ ಕಾರಿನಲ್ಲಿ ಕಡೆಯ ಕ್ಷಣದಲ್ಲಿ ಅವರ ಪುತ್ರಿ ಡರಿಯಾ ಡ್ಯುಗಿನಾ ಪ್ರಯಾಣಿಸಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.

ಮಾಸ್ಕೋದ ಹೊರವಲಯದಲ್ಲಿರುವ ಬೊಲ್ಶಿಯ್ ವಿಜೊಮಿ ನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಂದೆ ಮತ್ತು ಮಗಳು ಅಲ್ಲಿಂದ ಡ್ಯುಗಿನ್ ಅವರ ಟೊಯೊಟ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಜತೆಯಾಗಿ ಹಿಂತಿರುಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬೇರೊಂದು ವಾಹನದಲ್ಲಿ ಡ್ಯುಗಿನ್ ಹೊರಟರೆ, ಪುತ್ರಿ ಡರಿಯಾ ಟೊಯೊಟ ಕಾರನ್ನು ಏರುತ್ತಿದ್ದಂತೆಯೇ ಬಾಂಬ್ ಸ್ಫೋಟಿಸಿ ಮೃತಪಟ್ಟಿದ್ದಾರೆ. ಈ ದುರಂತದ ಬಗ್ಗೆ ತನಿಖೆಗೆ ಚಾಲನೆ ನೀಡಲಾಗಿದೆ ಎಂದು ರಶ್ಯದ ತನಿಖಾ ಸಮಿತಿ ಘೋಷಿಸಿದೆ.

ಪುಟಿನ್ ಅವರ ರಾಸ್ ಪುಟಿನ್ ಅಥವಾ ಪುಟಿನ್ ಅವರ ಮೆದುಳು ಎಂದು ಹೆಸರಾಗಿರುವ ಡ್ಯುಗಿನ್, ರಶ್ಯ ಭಾಷೆ ಮಾತನಾಡುವ ಪ್ರದೇಶಗಳು ವಿಶಾಲವಾದ ರಶ್ಯದಲ್ಲಿ ಏಕೀಕರಣವಾಗಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.ಜತೆಗೆ, ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಹೃತ್ಪೂರ್ವಕವಾಗಿ ಬೆಂಬಲಿಸುತ್ತಿದ್ದಾರೆ. 2014ರಲ್ಲಿ ರಶ್ಯವು ಉಕ್ರೇನ್ನ ಕ್ರಿಮಿಯಾ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಬೆಂಬಲಿಸಿದ್ದ ಹಿನ್ನೆಲೆಯಲ್ಲಿ ಅವರು ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News