ನೈಜೀರಿಯಾ: ೪ ಕ್ರೈಸ್ತ ಸನ್ಯಾಸಿನಿಯರ ಅಪಹರಣ

Update: 2022-08-22 17:49 GMT

ಅಬುಜಾ, ಆ.೨೨: ಆಗ್ನೇಯ ನೈಜೀರಿಯಾದ ಇಮೊ ರಾಜ್ಯದ ಹೆದ್ದಾರಿಯಲ್ಲಿ ಪ್ರಾರ್ಥನೆಗೆ ಚರ್ಚ್ಗೆ ತೆರಳುತ್ತಿದ್ದ ೪ ಕ್ರೈಸ್ತ ಸನ್ಯಾಸಿನಿಯರನ್ನು ಗುರುತಿಸಲಾಗದ ಬಂದೂಕುಧಾರಿಗಳು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. 

ರವಿವಾರ ಅಪಹರಣ ನಡೆದಿದೆ ಎಂದು ಕೈಸ್ತ ಸನ್ಯಾಸಿನಿಯರು ವಾಸಿಸುತ್ತಿದ್ದ ಕಾನ್ವೆಂಟ್ ಸೋಮವಾರ ಮಾಹಿತಿ ನೀಡಿದೆ. ದೇಶದಲ್ಲಿ  ರಸ್ತೆ ಪ್ರಯಾಣ ಅಸುರಕ್ಷಿತವಾಗಿರುವುದಕ್ಕೆ ಇದು ಇತ್ತೀಚಿನ ಸಂಕೇತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. 
 ಇಮೊ ರಾಜ್ಯದ ಚರ್ಚ್ ನಲ್ಲಿ ಆಯೋಜಿಸಲಾಗಿದ್ದ ವಂದನಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗ್ನೇಯದ ರಿವರ್ಸ್  ಸ್ಟೇಟ್ ಪ್ರದೇಶದಿಂದ ಆಗಮಿಸುತ್ತಿದ್ದ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ಅಪಹರಿಸಲಾಗಿದೆ.

ಅವರ ತ್ವರಿತ ಮತ್ತು ಸುರಕ್ಷಿತ ಬಿಡುಗಡೆಗಾಗಿ ನಾವು ತೀವ್ರ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಸಿಸ್ಟರ್ಸ್ ಆಫ್ ಜೀಸಸ್  ಚರ್ಚ್ನ ಪ್ರಧಾನ ಕಾರ್ಯದರ್ಶಿ ಝಿಟಾ ಇಹೆಡೊರೊ ಹೇಳಿದ್ದಾರೆ. ನೈಜೀರಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಶಸ್ತ್ರ ಗುಂಪುಗಳು ಪಾದ್ರಿಗಳು ಸೇರಿದಂತೆ ಜನರನ್ನು ಅಪಹರಿಸಿ ಒತ್ತೆಹಣಕ್ಕೆ ಬೇಡಿಕೆ ಇರಿಸುವ ಪ್ರಕರಣ ಹೆಚ್ಚುತ್ತಿದ್ದು ಆಫ್ರಿಕಾ ಖಂಡದ ಅತ್ಯಧಿಕ ಜನಸಂಖ್ಯೆಯ ದೇಶದಲ್ಲಿ ಅಭದ್ರತೆಯ ಸ್ಥಿತಿ ನೆಲೆಸಿದೆ.

ಇಂತಹ ಕೃತ್ಯದಲ್ಲಿ ತೊಡಗಿರುವ ಸಶಸ್ತ್ರ ಪಡೆಗಳ ವಿರುದ್ಧ ನೈಜೀರಿಯಾದ ಸೇನೆಯ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News