ʼನಿಮಗಾಗಿ ಪ್ರಾರ್ಥಿಸುತ್ತಿದ್ದೇನೆʼ: ವಿರಾಟ್‌ ಕೊಹ್ಲಿಯೊಡನೆ ಪಾಕ್‌ ವೇಗಿ ಶಾಹಿನ್‌ ಅಫ್ರಿದಿ ಮಾತುಕತೆ ವೀಡಿಯೊ ವೈರಲ್

Update: 2022-08-26 17:23 GMT

ಏಷ್ಯಾ ಕಪ್ 2022 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮುನ್ನ ಎರಡೂ ತಂಡಗಳ ಆಟಗಾರರು ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸದ ಅವಧಿಯಲ್ಲಿ ಪರಸ್ಪರ ಸಂವಹನ ನಡೆಸುತ್ತಿರುವ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗುರುವಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಯುಜ್ವೇಂದ್ರ ಚಹಾಲ್ ಮತ್ತು ಕೆಎಲ್ ರಾಹುಲ್ ಮೊದಲಾದವರು ಗಾಯದ ಕಾರಣದಿಂದ ಪಂದ್ಯದಿಂದ ಹೊರಗುಳಿದಿರುವ ಶಾಹೀನ್ ಅಫ್ರಿದಿ ಅವರೊಂದಿಗೆ ಸಂವಾದ ನಡೆಸಿದರು. ಕೊಹ್ಲಿ ಮತ್ತು ಶಾಹೀನ್ ನಡುವಿನ ಮಾತುಕತೆಯ ಸಮಯದಲ್ಲಿ, ಕೊಹ್ಲಿ ಬಳಿ ತಾವು ಮತ್ತೊಮ್ಮೆ ಫಾರ್ಮ್ ಅನ್ನು ಕಂಡುಕೊಳ್ಳಲು ಬಯಸುತ್ತೇನೆ ಎಂದು ಶಾಹೀನ್‌ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗುದೆ.

ಕೊಹ್ಲಿ, ಕೊನೆಯದಾಗಿ 2019 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಮೂರು ಅಂಕಿಗಳ ರನ್‌ ಮೊತ್ತವನ್ನು ಕೊಹ್ಲಿ ಬಾರಿಸಿದ್ದು ಅದೇ ಕೊನೆ.  

ಶಾಹೀನ್ ಮತ್ತು ಕೊಹ್ಲಿ ನಡುವಿನ ಸಂವಾದದ ಸಮಯದಲ್ಲಿ, ಕೊಹ್ಲಿ ಮೊದಲು ಪಾಕಿಸ್ತಾನದ ವೇಗಿ ಶಾಹೀನ್‌ ರ ಗಾಯಗಳನ್ನು ಪರೀಕ್ಷಿಸಿದರು. ಅದರ ನಂತರ,  "ಆಪ್ಕೆ ಲೈ ದುವಾ ಕರ್ ರಹೇ ಹೈ ಆಪ್ ವಾಪಿಸ್ ಫಾರ್ಮ್ ಮಿ ಆಯೆ (ನಿಮ್ಮ ಫಾರ್ಮ್ ಮರಳಿ ಬರಬೇಕೆಂದು ನಾವು ಪ್ರಾರ್ಥಿಸುತ್ತಿದ್ದೇವೆ)" ಎಂದು ಶಾಹಿನ್‌ ಕೊಹ್ಲಿ ಬಳಿ ಹೇಳುವುದು ಕಂಡು ಬಂದಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹಂಚಿಕೊಂಡ ಈ ವಿಡಿಯೋವನ್ನು ಹಲವಾರು ಮಂದಿ ಹಂಚಿಕೊಂಡಿದ್ದಾರೆ. ಬದ್ಧ ವೈರಿಗಳೆಂಬಂತೆ ತೋರುವ ಎರಡು ರಾಷ್ಟ್ರಗಳ ಆಟಗಾರರ ಕ್ರೀಡಾ ಸ್ಪೂರ್ತಿಯನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ಉನ್ಮಾದ ಹೆಚ್ಚಾದ ಈ ಸಮಯದಲ್ಲಿ ಎರಡೂ ಕಡೆಯ ಆಟಗಾರರ ನಡುವಿನ ನಿಜವಾದ ಪ್ರೀತಿಯು ನೋಡಲು ತುಂಬಾ ಚೆನ್ನಾಗಿದೆ, ಈ ತಂಡಗಳು ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಪರಸ್ಪರ ಆಡುತ್ತವೆ ಎಂದು ಹೇಮಂತ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

“ಭಾರತ-ಪಾಕಿಸ್ತಾನ ನಿಯಮಿತವಾಗಿ ಆಡಿದರೆ, ಅದರ ಸುತ್ತಲಿನ ಮಾತುಕತೆಯು ಶೀಘ್ರದಲ್ಲೇ ಸಾಮಾನ್ಯವಾಗುತ್ತದೆ. ಅತಿರಾಷ್ಟ್ರೀಯತೆ ಇಲ್ಲ, ಅಸಂಬದ್ಧ ಪ್ರಚಾರದ ಜಾಹೀರಾತು ಇಲ್ಲ. ಕೇವಲ ಶುದ್ಧ ಗುಣಮಟ್ಟದ ಕ್ರಿಕೆಟ್. ಇದು ತುಂಬಾ ಅಗತ್ಯವಿದೆ” ಎಂದು ಕಾಶಿಶ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News