ಚೀನಾದಿಂದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ: ಉಯಿಗರ್ ಮುಸ್ಲಿಮರ ವಿರುದ್ಧ ದೌರ್ಜನ್ಯ; ವಿಶ್ವಸಂಸ್ಥೆ

Update: 2022-09-01 15:52 GMT

ಜಿನೆವಾ,  ಸೆ.೧: ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಿಗ್ರಹಿಸುವ ಹೆಸರಿನಲ್ಲಿ ಚೀನಾವು ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದ್ದು, ಸ್ವಾತಂತ್ರ್ಯದಿಂದ ನಿರಂಕುಶವಾಗಿ ವಂಚಿತವಾಗಿರುವ ಎಲ್ಲಾ ವ್ಯಕ್ತಿಗಳನ್ನೂ ತ್ವರಿತವಾಗಿ ಬಿಡುಗಡೆಗೊಳಿಸುವಂತೆ ಚೀನಾಕ್ಕೆ ಕರೆ ನೀಡಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರು ಕಳೆದ ಮೇ ತಿಂಗಳಿನಲ್ಲಿ ಚೀನಾಕ್ಕೆ ಭೇಟಿ ನೀಡಿದ ಬಳಿಕ ಸಿದ್ಧಪಡಿಸಿದ್ದ ವರದಿಯನ್ನು ಚೀನಾದ ತೀವ್ರ ಒತ್ತಡದ ನಡುವೆಯೂ ಬುಧವಾರ ಬಿಡುಗಡೆಗೊಳಿಸಲಾಗಿದೆ. ತಮ್ಮ ೪ ವರ್ಷಗಳ ಅಧಿಕಾರಾವಧಿಯ ಅಂತಿಮ ದಿನದಂದು ಬ್ಯಾಚೆಲೆಟ್ ವರದಿ ಬಿಡುಗಡೆಗೊಳಿಸಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಬಲವಂತದ ವೈದ್ಯಕೀಯ ಶಸ್ತ್ರಚಿಕಿತ್ಸೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಬಂಧನದಲ್ಲಿರಿಸಿರುವುದು, ಬಂಧಿತರೊಂದಿಗೆ ಅತ್ಯಂತ ಅಮಾನವೀಯವಾಗಿ ವರ್ತಿಸುವುದು, ಚಿತ್ರಹಿಂಸೆಯ ಆರೋಪಗಳು, ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಆರೋಪಗಳು ಶ್ವಾಸಾರ್ಹವಾಗಿದೆ ಎಂದು ವರದಿ ಹೇಳಿದೆ.

ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಗರ್ ಮುಸ್ಲಿಮರ ಹಾಗೂ ಇತರ ಪ್ರಧಾನ  ಮುಸ್ಲಿಂ ಸಮುದಾಯಗಳ ಸದಸ್ಯರ  ವ್ಯಾಪಕ ಅನಿಯಂತ್ರಿತ ಬಂಧನಗಳು ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿರುವುದರಿಂದ ಇದನ್ನು ಅಂತರಾಷ್ಟ್ರೀಯ ಅಪರಾಧ, ನಿರ್ಧಿಷ್ಟವಾಗಿ ಮಾನವೀಯತೆಯ ವಿರುದ್ಧದ ಅಪರಾಧ ಎಂದು ಪರಿಗಣಿಸಬಹುದು ಎಂದು ವರದಿ ತೀರ್ಮಾನಿಸಿದೆ.

ಲಭ್ಯ ಮಾಹಿತಿ ಮತ್ತು ದಾಖಲೆಗಳ ಕಟ್ಟುನಿಟ್ಟಾದ ಪರಿಶೀಲನೆಯ ಬಳಿಕ ವರದಿಯನ್ನು ಅಂತಿಮಗೊಳಿಸಲಾಗಿದೆ ಮತ್ತು ಜನಾಂಗೀಯ ತಾರತಮ್ಯ, ಚಿತ್ರಹಿಂಸೆಯಂತಹ ವಿಷಯಗಳ ಕುರಿತ ಸಮಾವೇಶದ ನಿರ್ಣಯ ಸೇರಿದಂತೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಕ್ಕೆ ಚೀನಾದ ಬಾಧ್ಯತೆಯನ್ನು ಆಧರಿಸಿದೆ. ಕ್ಸಿನ್‌ಜಿಯಾಂಗ್ ಉಯಿಗರ್ ಸ್ವಾಯತ್ತ ಪ್ರದೇಶ(ಕ್ಸುವಾರ್)ದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಚೀನಾ ಸರಕಾರ, ವಿಶ್ವಸಂಸ್ಥೆ ಅಂತರ್‌ಸರಕಾರಿ ಸಂಸ್ಥೆಗಳು, ಮಾನವ ಹಕ್ಕು ವ್ಯವಸ್ಥೆಗಳು  ಮತ್ತು ಅಂತರಾಷ್ಟ್ರೀಯ ಸಮುದಾಯವು ಹೆಚ್ಚು ವಿಶಾಲವಾಗಿ ಗಮನ ಹರಿಸಬೇಕು. ಭಯೋತ್ಪಾದನೆ ನಿಗ್ರಹ, ತೀವ್ರವಾದದ ನಿಗ್ರಹದ ಕಾರ್ಯತಂತ್ರದ ಕ್ರಮದಿಂದ ಕ್ಸುವಾರ್‌ನಲ್ಲಿ ಗಂಭೀರ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ನಿರ್ಬಂಧಗಳ ಮಾದರಿ ತಾರತಮ್ಯದ ಅಂಶದಿಂದ ನಿರೂಪಿಸಲ್ಪಟ್ಟಿದೆ, ಯಾಕೆಂದರೆ ಇದಕ್ಕೆ ಆಧಾರವಾಗಿರುವ ಕಾಯ್ದೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಉಯಿಗರ್ ಮತ್ತು ಇತರ ಪ್ರಧಾನ ಮುಸ್ಲಿಮ್ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ.

ಚೀನಾದ ದೇಶೀಯ ಭಯೋತ್ಪಾದನಾ ವಿರೋಧಿ ಕಾನೂನು ವ್ಯವಸ್ಥೆಯು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳ ದೃಷ್ಟಿಕೋನದಿಂದ ಗಮನಿಸಿದರೆ ಸಮಸ್ಯಾತ್ಮಕವಾಗಿದೆ. ಮತ್ತು ತಥಾಕಥಿತ ವಿಇಟಿಸಿ( ವೃತ್ತಿಶಿಕ್ಷಣ ಮತ್ತು ತರಬೇತಿ ಕೇಂದ್ರ) ಮತ್ತಿತರ ವ್ಯವಸ್ಥೆಗಳ ಮೂಲಕ ಕ್ಸುವಾರ್‌ನಲ್ಲಿ ಉಯಿಗರ್ ಮತ್ತು ಇತರ ಪ್ರಧಾನ ಮುಸ್ಲಿಮ್ ಸಮುದಾಯಗಳ ಸದಸ್ಯರ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡಿಕೊಟ್ಟಿದೆ. ವೃತ್ತಿಪರ ತರಬೇತಿ ಕೇಂದ್ರದಲ್ಲಿ ಬಂಧಿತರಾಗಿರುವ ಜನರು ಬಲವಂತದ ವೈದ್ಯಕೀಯ ಶಸ್ತ್ರಚಿಕಿತ್ಸೆ, ಪ್ರತಿಕೂಲ ಪರಿಸ್ಥಿತಿ ಸೇರಿದಂತೆ ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ.

ಉಯಿಗರ್‌ಗಳು ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರು ಎದುರಿಸುತ್ತಿರುವ ವಿಶಾಲವಾದ ತಾರತಮ್ಯವು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರö್ಯದ ಮೇಲಿನ ದೂರಗಾಮಿ, ಅನಿಯಂತ್ರಿತ ಮತ್ತು ತಾರತಮ್ಯದ ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಧಾರ್ಮಿಕ ಗುರುತುಗಳು ಮತ್ತು ಅಭಿವ್ಯಕ್ತಿಯ ಮೇಲಿನ ಅನಗತ್ಯ ನಿರ್ಬಂಧ, ಗೌಪ್ಯತೆ ಮತ್ತು ಚಲನೆಯ ಹಕ್ಕುಗಳ ನಿರ್ಬಂಧ ಇದರಲ್ಲಿ ಸೇರಿದೆ. ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ನೀತಿಗಳ ಬಲವಂತದ ಮತ್ತು ತಾರತಮ್ಯದ ಜಾರಿ ಮೂಲಕ ಸಂತಾನೋತ್ಪತ್ತಿ ಹಕ್ಕುಗಳ ಉಲ್ಲಂಘನೆ ಇದರಲ್ಲಿ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕ್ಸುವಾರ್‌ನಲ್ಲಿ ಬಂಧನದಲ್ಲಿರುವ ಎಲ್ಲಾ ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಚೀನಾ ಸರಕಾರ ಪ್ರಾಮಾಣಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಕೋರಿದವರಿಗೆ ತಕ್ಷಣ ಸ್ಪಷ್ಟನೆ  ನೀಡಬೇಕು(ಅವರು ಈಗ ಎಲ್ಲಿದ್ದಾರೆ ಮತ್ತು ಆರೋಗ್ಯಸ್ಥಿತಿ ಹೇಗಿದೆ ಇತ್ಯಾದಿ). ಚೀನಾ ಸರಕಾರವು ಕ್ಸಿನ್‌ಜಿಯಾಂಗ್‌ನಲ್ಲಿ ರಾಷ್ಟಿçÃಯ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನ ಸಂಪೂರ್ಣ ಪರಿಶೀಲನೆ ನಡೆಸಬೇಕು. ಮಾನವ ಹಕ್ಕುಗಳ ಉಲ್ಲಂಘನೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಮಸೀದಿ, ಮಂದಿರಗಳನ್ನು ನಾಶಗೊಳಿಸಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡುವ ಜತೆಗೆ, ಇಂತಹ ಕೃತ್ಯಗಳನ್ನು ಸ್ಥಗಿತಗೊಳಿಸಬೇಕು  ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ರಾಜಕೀಯ ಪ್ರೇರಿತ: ಚೀನಾ ಪ್ರತಿಕ್ರಿಯೆ

ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಬಗ್ಗೆ ಆರೋಪಿಸಿರುವ ವಿಶ್ವಸಂಸ್ಥೆಯ ವರದಿ ಚೀನಾದ ವಿರುದ್ಧದ ರಾಜಕೀಯ ಸಾಧನವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ  ವಕ್ತಾರ ವಾಂಗ್ ವೆನ್‌ಬಿನ್ ಪ್ರತಿಕ್ರಿಯಿಸಿದ್ದಾರೆ.

ನಿರ್ಣಾಯಕ ವರದಿ ಎಂದು ನೀವು ಉಲ್ಲೇಖಿಸುವ ವರದಿಯು ಅಮೆರಿಕ ಮತ್ತು ಇತರ ಕೆಲವು ಪಾಶ್ಚಿಮಾತ್ಯ ಶಕ್ತಿಗಳಿಂದ ನೇರವಾಗಿ ಯೋಜಿಸಲಾಗಿದೆ ಮತ್ತು ತಯಾರಿಸಲ್ಪಟ್ಟಿದ್ದು  ಸಂಪೂರ್ಣ ಕಾನೂನುಬಾಹಿರ ಮತ್ತು ಅಸಮರ್ಥನೀಯವಾಗಿದೆ. ಈ ವರದಿಯು ತಪ್ಪು ಮಾಹಿತಿಯ ಭಂಡಾರವಾಗಿದೆ ಮತ್ತು  ಕ್ಸಿನ್‌ಜಿಯಾಂಗ್ ಅನ್ನು ಬಳಸಿ ಚೀನಾವನ್ನು ನಿಯಂತ್ರಿಸುವ ಪಾಶ್ಚಿಮಾತ್ಯರ ರಾಜಕೀಯ ಸಾಧನದ ಒಂದು ಭಾಗವಾಗಿದೆ' ಎಂದು ಸುದ್ಧಿಗೋಷ್ಟಿಯಲ್ಲಿ ವೆನ್‌ಬಿನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು ʼಅಭಿವೃದ್ಧಿಶೀಲ ರಾಷ್ಟ್ರಗಳ ವಿರುದ್ಧ ಇರುವ ಅಮೆರಿಕ ಮತ್ತು ಪಾಶ್ಚಿಮಾತ್ಯ ಕೊಲೆಗಡುಕರ ಜೊತೆಗಾರನಾಗುತ್ತಿದೆ'. ಅದು ಬಿಡುಗಡೆಗೊಳಿಸಿರುವ ವರದಿಯನ್ನು ಚೀನಾ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News