×
Ad

ಆಹಾರ, ನೀರಿನ ಕೊರತೆಯಿಂದ ಮ್ಯಾನ್ಮಾರ್ ಶಿಬಿರದಲ್ಲಿದ್ದ 7 ರೊಹಿಂಗ್ಯಾಗಳ ಮೃತ್ಯು: ವರದಿ

Update: 2022-09-02 22:13 IST

ಯಾಂಗ್ಯಾನ್, ಸೆ.೨: ಮ್ಯಾನ್ಮಾರ್ ನಲ್ಲಿ ಬಂಧನ ಕೇಂದ್ರದಲ್ಲಿದ್ದ 65 ರೊಹಿಂಗ್ಯಾ ನಿರಾಶ್ರಿತರಲ್ಲಿ 7 ಮಂದಿ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಮೃತಪಟ್ಟಿರುವುದಾಗಿ ಮ್ಯಾನ್ಮಾರ್ನ   ʼಗ್ಲೋಬಲ್ ನ್ಯೂಲೈಟ್'  ಸುದ್ಧಿಸಂಸ್ಥೆ ಶುಕ್ರವಾರ  ವರದಿ ಮಾಡಿದೆ.

ಯಾಂಗ್ಯಾನ್ನ ಸುಮಾರು 120 ಕಿ.ಮೀ ದಕ್ಷಿಣದಲ್ಲಿರುವ ಪ್ಯಾಪಾನ್ ನಗರದ ಸಮುದ್ರ ತೀರದ ಬಳಿ ದೋಣಿಯಲ್ಲಿ ಸಾಗುತ್ತಿದ್ದ 65 ರೊಹಿಂಗ್ಯಾ ನಿರಾಶ್ರಿತರನ್ನು  ಸೋಮವಾರ ಮ್ಯಾನ್ಮಾರ್ ಅಧಿಕಾರಿಗಳು ವಶಕ್ಕೆ ಪಡೆದು ಬಂಧನ ಕೇಂದ್ರದಲ್ಲಿ ಇರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಲ್ವರು ಕಳ್ಳಸಾಗಾಣೆದಾರರು ಮತ್ತು ಕಳ್ಳಸಾಗಣೆಗೆ ಒಳಗಾದ ೬೫ ಬೆಂಗಾಲಿಗಳನ್ನು (ರೊಹಿಂಗ್ಯಾಗಳನ್ನು ಅವಹೇಳನಕಾರಿಯಾಗಿ ಉಲ್ಲೇಖಿಸುವ ಪದ)  ತಾತ್ಕಾಲಿಕವಾಗಿ ಬಂಧಿಸಿಡಲಾಗಿತ್ತು. ಆದರೆ ಕೆಟ್ಟ ಹವಾಮಾನ, ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಅವರಲ್ಲಿ 7 ಮಂದಿ(ಮೂವರು ಪುರುಷರು, ನಾಲ್ವರು ಮಹಿಳೆಯರು) ಬಳಿಕ ಮೃತಪಟ್ಟಿದ್ದಾರೆ. ಇತರ 6 ಮಂದಿ ತೀವ್ರ ಅಸ್ವಸ್ಥಗೊಂಡಿದ್ದು ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ. ತಂಡದ ೫ ಮಂದಿಯನ್ನು ಬಂಧಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು  ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಬೌದ್ಧ ಬಹುಸಂಖ್ಯಾತ ಮ್ಯಾನ್ಮಾರ್ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ 2017ರಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯ ಬಳಿಕ ಸಾವಿರಾರು ರೊಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಓಡಿಹೋಗಿದ್ದರು. ಆದರೆ ಅಲ್ಲಿಯೂ ಅವರಿಗೆ ಸೂಕ್ತ ನೆಲೆ ಸಿಗದೆ ನಿರಂತರ ಹಿಂಸೆ, ಅತ್ಯಾಚಾರ, ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಇನ್ನೂ ಮ್ಯಾನ್ಮಾರ್ನಲ್ಲಿಯೇ ಉಳಿದುಕೊಂಡಿರುವ ರೊಹಿಂಗ್ಯಾಗಳನ್ನು ಬಾಂಗ್ಲಾದೇಶದ ಮಧ್ಯವರ್ತಿಗಳು ಎಂದು ಗುರುತಿಸಲಾಗುತ್ತಿದ್ದು ಪೌರತ್ವ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತದೆ ಮತ್ತು ಆರೋಗ್ಯ ಸೇವೆ, ಶಿಕ್ಷಣ ಪಡೆಯಲು ಅವಕಾಶ ನಿರಾಕರಿಸಲಾಗುತ್ತಿದೆ.

ಈ ರೀತಿಯ ಅನ್ಯಾಯ, ದೌರ್ಜನ್ಯ ಸಹಿಸಲಾಗದ ಹಲವರು  ಆಗ್ನೇಯ ಏಶ್ಯಾದ ಇತರ ದೇಶಗಳತ್ತ ಸಮುದ್ರ ಮಾರ್ಗವಾಗಿ ಪಲಾಯನ ಮಾಡುವ  ಅಪಾಯಕಾರಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇವರನ್ನು ಕಳ್ಳಸಾಗಣಿಕೆ ಮೂಲಕ ಇತರ ದೇಶಗಳಿಗೆ ರವಾನಿಸುವ ಜಾಲವೂ ಕಾರ್ಯಾಚರಿಸುತ್ತಿದ್ದು ಮುಸ್ಲಿಂ ಬಹುಸಂಖ್ಯಾತ ರಾಷ್ಷ್ರ ಮಲೇಶ್ಯಾವು  ರೊಹಿಂಗ್ಯಾ ನಿರಾಶ್ರಿತರಿಗೆ ಅತ್ಯಂತ ನೆಚ್ಚಿನ ನೆಲೆಯಾಗಿದೆ ಎಂದು ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News