ತನ್ನ ಸೇನೆಯಿಂದ ಪತ್ರಕರ್ತೆ ಶಿರೀನ್ ಹತ್ಯೆಯ ‘ಹೆಚ್ಚಿನ ಸಾಧ್ಯತೆ’ಯನ್ನು ಒಪ್ಪಿಕೊಂಡ ಇಸ್ರೇಲ್

Update: 2022-09-06 11:00 GMT
ಶಿರೀನ್ ಅಬು ಅಕ್ಲೆಹ್

ಜೆರುಸಲೇಂ,ಸೆ.6: ಅಲ್ ಝಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರು ತನ್ನ ಸೇನೆಯು ಆಕಸ್ಮಿಕವಾಗಿ ಹಾರಿಸಿದ ಗುಂಡಿನಿಂದ ಕೊಲ್ಲಲ್ಪಟ್ಟಿರುವ ಹೆಚ್ಚಿನ ಸಾಧ್ಯತೆಯಿದೆ ಎಂದು ಇಸ್ರೇಲ್ ಸೋಮವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ಮೇ 11ರಂದು ಫೆಲೆಸ್ತೀನ್‌ನ ಜೆನಿನ್‌ನಲ್ಲಿ ಇಸ್ರೇಲಿ ದಾಳಿಯ ವರದಿಗಾರಿಕೆಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಶಿರೀನ್ ಗುಂಡೇಟಿನಿಂದ ಮೃತಪಟ್ಟಿದ್ದರು.

ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಗರವನ್ನು 1967ರಲ್ಲಿ ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ವಶಪಡಿಸಿಕೊಂಡಿತ್ತು. ತಮ್ಮ ಭವಿಷ್ಯದ ದೇಶವನ್ನು ರೂಪಿಸಲು ಫೆಲೆಸ್ತೀನಿಯರು ಅದನ್ನು ಮರಳಿ ಬಯಸುತ್ತಿದ್ದಾರೆ. ತನ್ನ ಪತ್ರಕರ್ತೆ ಶಿರೀನ್‌ಗೆ ಇಸ್ರೇಲಿ ಸೇನೆಯು ಉದ್ದೇಶಪೂರ್ವಕವಾಗಿ ಗುಂಡಿಕ್ಕಿದೆ ಎಂದು ಅಲ್ ಝಝೀರಾ ಆರೋಪಿಸಿತ್ತು, ಆದರೆ ಇಸ್ರೇಲ್ ಸರಕಾರವು ಅದನ್ನು ನಿರಾಕರಿಸಿತ್ತು.

ಪತ್ರಕರ್ತೆಯ ಸಾವಿನ ಕುರಿತು ಸೋಮವಾರ ತನ್ನ ಅಂತಿಮ ತನಿಖಾ ವರದಿಯಲ್ಲಿ ಇಸ್ರೇಲ್ ರಕ್ಷಣಾ ಪಡೆಯು, ಶಿರೀನ್ ಅವರಿಗೆ ತಗುಲಿದ ಗುಂಡಿನ ಮೂಲವನ್ನು ನಿಸ್ಸಂದಿಗ್ಧವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅದಾಗ್ಯೂ ಗುಂಡಿನ ಕಾಳಗದ ಸಂದರ್ಭದಲ್ಲಿ ಶಂಕಿತ ಶಸ್ತ್ರಸಜ್ಜಿತ ಫೆಲೆಸ್ತೀನಿಯರ ಮೇಲೆ ತನ್ನ ಸೈನಿಕರು ಹಾರಿಸಿದ ಗುಂಡು ಆಕಸ್ಮಿವಾಗಿ ಶಿರೀನ್ ಅವರಿಗೆ ತಗುಲಿರುವ ಹೆಚ್ಚಿನ ಸಾಧ್ಯತೆಯಿದೆ ಎಂದು ತಿಳಿಸಿದೆ.

ಆದರೆ, ಕ್ರಿಮಿನಲ್ ಉದ್ದೇಶದ ಶಂಕೆ ಇಲ್ಲದಿರುವುದರಿಂದ ಗುಂಡು ಹಾರಾಟದ ಕುರಿತು ಇಸ್ರೇಲ್ ಕ್ರಿಮಿನಲ್ ತನಿಖೆಯನ್ನು ನಡೆಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ನಡುವೆ, ಶಿರೀನ್‌ರ ಕುಟುಂಬ ಮತ್ತು ಅಲ್ ಝಝೀರಾ ಇಸ್ರೇಲಿ ವರದಿಯಲ್ಲಿನ ಅಂಶಗಳನ್ನು ತಿರಸ್ಕರಿಸಿವೆ.

ನಿರೀಕ್ಷಿಸಿದ್ದಂತೆ ಶಿರೀನ್ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಇಸ್ರೇಲ್ ನಿರಾಕರಿಸಿದೆ. ಇಸ್ರೇಲಿ ಯುದ್ಧಾಪರಾಧಿಗಳು ತಮ್ಮ ಸ್ವಂತ ಅಪರಾಧಗಳ ಕುರಿತು ತನಿಖೆ ನಡೆಸುವುದಿಲ್ಲ ಎನ್ನುವುದು ಸ್ಪಷ್ಟವಾಗಿರುವುದರಿಂದ ಈ ಫಲಿತಾಂಶದಿಂದ ತಮಗೆ ಅಚ್ಚರಿಯುಂಟಾಗಿಲ್ಲ ಎಂದು ಶಿರೀನ್ ಕುಟುಂಬವು ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲ್‌ನ ನುಣುಚಿಕೊಳ್ಳುವ ಹೇಳಿಕೆಯು ಶಿರೀನ್ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದರಿಂದ ಪಾರಾಗುವ ಪ್ರಯತ್ನವಾಗಿದೆ ಎಂದು ಅಲ್‌ಝಝೀರಾ ಹೇಳಿದೆ.

ಜೂನ್‌ನಲ್ಲಿ ವಿಶ್ವಸಂಸ್ಥೆಯ ವರದಿಯೊಂದು ಸಹ, ಇಸ್ರೇಲಿ ಸೇನೆಯು ಹಾರಿಸಿದ್ದ ಗುಂಡುಗಳಿಂದ ಶಿರೀನ್ ಕೊಲ್ಲಲ್ಪಟ್ಟಿದ್ದಾರೆ ಎಂದು ಎತ್ತಿ ಹಿಡಿದಿತ್ತು. ತಾನು ಪತ್ರಕರ್ತೆ ಎನ್ನುವುದನ್ನು ಸ್ಪಷ್ಟಪಡಿಸಲು ಶಿರೀನ್ ಪ್ರಯತ್ನಿಸಿದ್ದರಾದರೂ ಅವರನ್ನು ಗುರಿಯಾಗಿಟ್ಟುಕೊಂಡು ಹಲವಾರು ಗುಂಡುಗಳನ್ನು ಹಾರಿಸಿದ್ದಂತೆ ಕಂಡು ಬರುತ್ತಿದೆ ಎಂದು ವಿಶ್ವಸಂಸ್ಥೆಯ ತನಿಖೆಯು ತೋರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News