ಕೆಸಿಆರ್ ಸರಕಾರದಿಂದ ಲಿಂಗ ಭೇದಭಾವ: ತೆಲಂಗಾಣ ರಾಜ್ಯಪಾಲರ ಆರೋಪ

Update: 2022-09-08 17:56 GMT
PHOTO : NDTV

ಹೈದರಾಬಾದ್,ಸೆ.8: ತಾನು ಮಹಿಳೆ ಎಂಬ ಕಾರಣಕ್ಕೆ ರಾಜ್ಯ ಸರಕಾರವು ತನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಗುರುವಾರ ಆರೋಪಿಸಿದ ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು, ತನ್ನ ಆರೋಪಕ್ಕೆ ಸಮರ್ಥನೆಯಾಗಿ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿದರು. ತನಗೆ ಸರಕಾರಿ ಹೆಲಿಕಾಪ್ಟರ್

 ಸಿಗದಿರುವುದು ಮತ್ತು ಗಣತಂತ್ರ ದಿನದಂದು ರಾಜ್ಯಪಾಲರ ಭಾಷಣ ಮತ್ತು ಧ್ವಜಾರೋಹಣಕ್ಕೆ ಅವಕಾಶ ನಿರಾಕರಿಸಿದ್ದನ್ನು ಅವರು ಉದಾಹರಣೆಗಳಾಗಿ ಪಟ್ಟಿ ಮಾಡಿದ್ದಾರೆ.

‘ನಾನು ಜನರನ್ನು ತಲುಪಲು ಬಯಸಿದಾಗೆಲ್ಲ ಖಂಡಿತವಾಗಿ ಏನಾದರೂ ಅಡಚಣೆ ಎದುರಾಗುತ್ತದೆ ’ಎಂದು ತನ್ನ ಅಧಿಕಾರಾವಧಿಯ ಮೂರು ವರ್ಷಗಳನ್ನು ಪೂರೈಸಿದ ಪ್ರಯುಕ್ತ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತ ಹೇಳಿದ ಸೌಂದರ್‌ರಾಜನ್,ಮಹಿಳಾ ರಾಜ್ಯಪಾಲರ ವಿರುದ್ಧ ಹೇಗೆ ತಾರತಮ್ಯವೆಸಗಲಾಗಿತ್ತು ಎನ್ನುವುದನ್ನು ರಾಜ್ಯವು ತನ್ನ ಇತಿಹಾಸದಲ್ಲಿ ಬರೆಯಲಿದೆ ಎಂದರು.

ಟಿಆರ್‌ಎಸ್ ಅಥವಾ ಕೆ.ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ಅದರ ಸರಕಾರ ರಾಜ್ಯಪಾಲರ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ.

ಸೌಂದರ್‌ರಾಜನ್ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷೆಯಾಗಿರುವುದರಿಂದ ಈ ಆರೋಪಗಳಿಗೆ ರಾಜಕೀಯ ಕೋನವನ್ನು ಗುರುತಿಸಲಾಗುತ್ತಿದೆ.

 ಕೆಸಿಆರ್ 2024ರ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಡ್ಡಲು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಟಿಆರ್‌ಎಸ್ ಸರಕಾರ ಆಗಾಗ್ಗೆ ಪರಸ್ಪರ ಕಿತ್ತಾಟ ನಡೆಸುತ್ತಲೇ ಇವೆ.

 ‘ಈಗಲೂ ನಾನೂ ಹೋದಲ್ಲೆಲ್ಲ ಶಿಷ್ಟಾಚಾರವನ್ನು ಪಾಲಿಸಲಾಗುತ್ತಿಲ್ಲ. ಹುದ್ದೆಗೆ ಗೌರವ ನೀಡಲೇಬೇಕು ’ ಎಂದೂ ಸೌಂದರ್‌ರಾಜನ್ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News