ಎಲ್ಲ ಮಾದರಿಯ ಕ್ರಿಕೆಟಿಗೆ ಕನ್ನಡಿಗ ರಾಬಿನ್ ಉತ್ತಪ್ಪ ನಿವೃತ್ತಿ

Update: 2022-09-14 17:13 GMT
Photo:PTI

ಹೊಸದಿಲ್ಲಿ, ಸೆ.14: ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin  Uthappa)ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ತನ್ನ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು.

ಕನ್ನಡ ಕುವರ ಉತ್ತಪ್ಪ ಟ್ವಿಟರ್‌ನ ಮೂಲಕ ತನ್ನ ವೃತ್ತಿಜೀವನದಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದರು.ಆಕ್ರಮಣಕಾರಿ ಬ್ಯಾಟಿಂಗ್‌ಗೆ ಪ್ರಸಿದ್ಧಿ ಪಡೆದಿದ್ದ ಉತ್ತಪ್ಪ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಉತ್ತಪ್ಪ 2007ರಲ್ಲಿ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಐಪಿಎಲ್ ತಂಡದಲ್ಲಿ 2 ಬಾರಿ ಚಾಂಪಿಯನ್ ತಂಡದ ಸದಸ್ಯರಾಗಿದ್ದ ಅವರು ಒಮ್ಮೆ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು.
 
ಅವರು 2006ರಲ್ಲಿ ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು. ಭಾರತದ ಪರ 46 ಏಕದಿನ ಪಂದ್ಯಗಳನ್ನು ಆಡಿದ್ದ ಅವರು ಒಟ್ಟು 934 ರನ್ ಗಳಿಸಿದ್ದರು. 86 ವೈಯಕ್ತಿಕ ಗರಿಷ್ಠ ಸ್ಕೋರಾಗಿತ್ತು. ಉತ್ತಪ್ಪ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ 2007ರ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದರು. 13 ಟಿ-20 ಪಂದ್ಯಗಳನ್ನು ಆಡಿರುವ ಉತ್ತಪ್ಪ 118.01ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 249 ರನ್ ಗಳಿಸಿದ್ದರು.

2015ರಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದಾರೆ. ಅದೇ ಸರಣಿಯಲ್ಲಿ ಝಿಂಬಾಬ್ವೆ ವಿರುದ್ಧವೇ ಕೊನೆಯ ಟಿ-20 ಪಂದ್ಯ ಆಡಿದ್ದರು. ಆದಾಗ್ಯೂ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದರು. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.

 ಉತ್ತಪ್ಪ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು 130.35ರ ಸ್ಟ್ರೈಕ್‌ರೇಟ್‌ನಲ್ಲಿ 27 ಅರ್ಧಶತಕಗಳ ಸಹಿತ ಒಟ್ಟು 4,952 ರನ್ ಗಳಿಸಿದ್ದಾರೆ.

‘‘ನನ್ನ ದೇಶ ಹಾಗೂ ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವ ಶ್ರೇಷ್ಠ ಗೌರವ ನನಗೆ ಲಭಿಸಿದೆ. ಕೃತಜ್ಞತಾಭಾವದಿಂದ ಭಾರತ ಕ್ರಿಕೆಟ್ ಎಲ್ಲ ಮಾದರಿಯಿಂದ ನಿವೃತ್ತಿಯಾಗಲು ನಿರ್ಧರಿಸಿರುವೆ. ಎಲ್ಲರಿಗೂ ಧನ್ಯವಾದಗಳು’’ ಎಂದು ಟ್ವಿಟರ್‌ನಲ್ಲಿ ಉತ್ತಪ್ಪ ಬರೆದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News