ಬಿಸಿಸಿಐನ ಸಂವಿಧಾನ ತಿದ್ದುಪಡಿಗೆ ಸುಪ್ರೀಂಕೋರ್ಟ್ ಅಸ್ತು, ಗಂಗುಲಿ, ಜಯ್ ಶಾ 2ನೇ ಇನಿಂಗ್ಸ್‌ಗೆ ಹಾದಿ ಸುಗಮ

Update: 2022-09-14 15:48 GMT
ಜಯ್ ಶಾ, Photo:PTI

ಹೊಸದಿಲ್ಲಿ, ಸೆ.14: ಈ ಮೊದಲು ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರೂ ಬಿಸಿಸಿಐಯಲ್ಲಿ ಸತತ ಎರಡನೇ ಅವಧಿಗೆ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳಾಗಿ ಮುಂದುವರಿಯಲು ಬಿಸಿಸಿಐನ ಸಂವಿಧಾನಕ್ಕೆ ತಿದ್ದುಪಡಿ ತರಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ಕಾರ್ಯದರ್ಶಿ ಜಯ್ ಶಾಗೆ (BCCI President Sourav Ganguly and Secretary Jay Shah )2ನೇ ಇನಿಂಗ್ಸ್ ಆರಂಭಿಸಲು ಹಾದಿ ಸುಗಮವಾಗಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಆರು ವರ್ಷ ಹಾಗೂ ಬಿಸಿಸಿಐನಲ್ಲಿ ಆರು ವರ್ಷ ಸೇರಿದಂತೆ ಪದಾಧಿಕಾರಿಗಳು 12 ವರ್ಷಗಳ ನಿರಂತರ ಅಧಿಕಾರಾವಧಿಯನ್ನು ಹೊಂದಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

‘‘ಪದಾಧಿಕಾರಿಗಳು ಬಿಸಿಸಿಐ ಹಾಗೂ ರಾಜ್ಯದ ಒಂದು ಹುದ್ದೆಯಲ್ಲಿ ತಲಾ 3 ವರ್ಷಗಳ ಕಾಲ ಸತತ 2 ಅವಧಿಗಳನ್ನು ಹೊಂದಬಹುದು. ಆ ನಂತರ ಕೂಲ್ ಆಫ್ ಅವಧಿ ಬರುತ್ತದೆ. ಕೂಲಿಂಗ್ ಆಫ್ ಅವಧಿಯ ಉದ್ದೇಶ ಅನಪೇಕ್ಷಿತ ಏಕಸ್ವಾಮ್ಯವನ್ನು ಸೃಷ್ಟಿಸುವುದನ್ನು ತಡೆಯುವುದಾಗಿದೆ’’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

  ಬಿಸಿಸಿಐನ ಸಂವಿಧಾನದ ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಗಂಗುಲಿ ಹಾಗೂ ಶಾ ಅವರ ಮುಂದುವರಿಕೆ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ಗಂಗುಲಿ ಹಾಗೂ ಶಾ ಈಗಿನ ಹುದ್ದೆಗೆ ಆಯ್ಕೆಯಾಗುವ ಮೊದಲೇ ಬಂಗಾಳ ಹಾಗೂ ಗುಜರಾತ್ ಕ್ರಿಕೆಟ್ ಸಂಸ್ಥೆಗಳಲ್ಲಿ 3 ವರ್ಷಗಳ ಅವಧಿಯನ್ನು ಪೂರೈಸಿದ್ದರು. ಅಧ್ಯಕ್ಷ ಗಂಗುಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ತನ್ನ ಪದಾಧಿಕಾರಿಗಳ ಅಧಿಕಾರಾವಧಿಯ ನಡುವಿನ ಕಡ್ಡಾಯ ಕೂಲಿಂಗ್ ಅವಧಿಯನ್ನು ತೆಗೆದು ಹಾಕಲು ತನ್ನ ಸಂವಿಧಾನ ತಿದ್ದುಪಡಿಗೆ ಅವಕಾಶ ಕೋರಿ ಬಿಸಿಸಿಐ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News