ದೇಶಿ ಟಿ-20ಯಲ್ಲಿ 'ಸೂಪರ್ ಸಬ್' ಎಂಬ ಹೊಸ ಪ್ರಯೋಗ

Update: 2022-09-17 03:01 GMT

ಹೊಸದಿಲ್ಲಿ: ದೇಶಿ ಟಿ-20 ಕ್ರಿಕೆಟ್‍ನಲ್ಲಿ 'ತಂತ್ರಗಾರಿಕೆಯ ಬದಲಿ ಆಟಗಾರ' ಎಂಬ ಹೊಸ ಪ್ರಯೋಗಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ.

ಅಕ್ಟೋಬರ್‌ ನಲ್ಲಿ ಆರಂಭವಾಗುವ ಸೈಯ್ಯದ್ ಮುಸ್ತಕ್ ಅಲಿ ಟ್ರೋಫಿಯಲ್ಲಿ ಈ ಹೊಸ ಪ್ರಯೋಗ ಜಾರಿಯಾಗಲಿದ್ದು, ಬದಲಿ ಆಟಗಾರನನ್ನು "ಇಂಪ್ಯಾಕ್ಟ್ ಪ್ಲೇಯರ್" ಎಂದು ಕರೆಯಲಾಗುತ್ತದೆ.

ಫುಟ್ಬಾಲ್, ರಗ್ಬಿ, ಬ್ಯಾಸ್ಕೆಟ್‍ಬಾಲ್ ಮತ್ತು ಬೇಸ್‍ಬಾಲ್‍ನಂಥ ಕ್ರೀಡೆಗಳಲ್ಲಿ ತಂತ್ರಗಾರಿಕೆಯ ಭಾಗವಾಗಿ ಬದಲಿ ಆಟಗಾರರನ್ನು ನಿಯೋಜಿಸಿಕೊಳ್ಳಲು ಅವಕಾಶವಿದ್ದು, ಅದೇ ಹಾದಿಯನ್ನು ಟಿ-20 ಕ್ರಿಕೆಟ್‍ಗೆ ಕೂಡಾ ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ.

"ಇಂಪ್ಯಾಕ್ಟ್ ಪ್ಲೇಯರ್ ಪರಿಕಲ್ಪನೆಯಡಿ ಪ್ರತಿ ಪಂದ್ಯದಲ್ಲಿ ಒಬ್ಬ ಬದಲಿ ಆಟಗಾರ ಹೆಚ್ಚು ಸಕ್ರಿಯ ಪಾತ್ರ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಇದು ಈ ಕ್ರೀಡೆಗೆ ಹೊಸ ತಂತ್ರಗಾರಿಕೆಯ ಆಯಾಮವಾಗಿದೆ" ಎಂದು ಬಿಸಿಸಿಐ ದಾಖಲೆಗಳಿಂದ ತಿಳಿದುಬರುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಮೊದಲು ಸೂಪರ್ ಸಬ್ ಪ್ರಯೋಗವನ್ನು ಏಕದಿನ ಕ್ರಿಕೆಟ್‍ನಲಿ 2005ರಲ್ಲಿ ಪರಿಚಯಿಸಿತ್ತು. ಆದರೆ ಒಂದು ವರ್ಷದ ಒಳಗೆ ಇದು ಕಣ್ಮರೆಯಾಯಿತು. ಆದಾಗ್ಯೂ ಐಪಿಎಲ್‍ನಂಥ ಪ್ರಮುಖ ಟೂರ್ನಿಯ ಬದಲಾಗಿ ದೇಶೀಯ ಟೂರ್ನಿಯಲ್ಲಿ ಇದನ್ನು ಮರು ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಇತರ ತಂಡ ಕ್ರೀಡೆಗಳನ್ನು ಸರಿಗಟ್ಟಲು ನೆರವಾಗುವ ನಿಟ್ಟಿನಲ್ಲಿ ಈ ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News