ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲ್: ಕರ್ನಾಟಕದ ಅತ್ಲೀಟ್ ಎಂ.ಆರ್. ಪೂವಮ್ಮಗೆ 2 ವರ್ಷಗಳ ನಿಷೇಧ

Update: 2022-09-20 14:47 GMT
ಎಂ.ಆರ್. ಪೂವಮ್ಮ (Photo: sportstar.thehindu.com)

ಹೊಸದಿಲ್ಲಿ: ಭಾರತದ ಹಿರಿಯ ಓಟಗಾರ್ತಿ  ಹಾಗೂ ಏಷ್ಯನ್‌ ಗೇಮ್ಸ್‌ ಪದಕ ವಿಜೇತೆ,  ಕರ್ನಾಟಕದ  ಎಂ.ಆರ್‌ .ಪೂವಮ್ಮ (MR Poovamma)ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದು,  ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ.

ಪೂವಮ್ಮ ಈ ಹಿಂದೆ 3 ತಿಂಗಳ ತನಕ ನಿಷೇಧಕ್ಕೆ ಒಳಗಾಗಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು.

ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್  ಕೂಟದಲ್ಲಿ  ಭಾಗವಹಿಸಿದ್ದರು. ಈ ಸಮಯದಲ್ಲಿ 32 ವರ್ಷದ ಪೂವಮ್ಮ ಅವರಿಂದ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿತ್ತು.  ಅವರು ಪರೀಕ್ಷೆಗೆ ನೀಡಿದ್ದ ಮಾದರಿಯಲ್ಲಿ ನಿಷೇಧಿತ ಮೆಥೈಲ್‌ಹೆಕ್ಸಾನೀಮೈನ್‌ ಮದ್ದಿನ ಅಂಶ ಇರುವುದು ಪತ್ತೆಯಾಗಿದೆ.

 ಈ ಹಿನ್ನೆಲೆಯಲ್ಲಿ ಡೋಪಿಂಗ್ ವಿರೋಧಿ ಶಿಸ್ತು ಸಮಿತಿಯು(ಎಡಿಡಿಪಿ) ಈ ವರ್ಷದ  ಜೂನ್ ಆದೇಶದಲ್ಲಿ ಪೂವಮ್ಮಗೆ ಕೇವಲ ಮೂರು ತಿಂಗಳು  ನಿಷೇಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಶಿಸ್ತು ಸಮಿತಿ ( ಎಡಿಎಪಿ)ಪೂವಮ್ಮ ಅವರಿಗೆ ಶಿಕ್ಷೆಯನ್ನು 2 ವರ್ಷಕ್ಕೆ ವಿಸ್ತರಿಸಿದೆ.

ಪೂವಮ್ಮ ಅವರಿಂದ ಪರೀಕ್ಷೆಗಾಗಿ 2021ರ ಫೆಬ್ರವರಿ 18ರಂದು ಮಾದರಿ ಸಂಗ್ರಹಿಸಲಾಗಿತ್ತು. ಅಂದಿನಿಂದ ಅವರು ಸ್ಪರ್ಧಿಸಿದ್ದ ಎಲ್ಲ ಫಲಿತಾಂಶಗಳನ್ನುಅಮಾನ್ಯಗೊಳಿಸಲಾಗುತ್ತದೆ. ಗೆದ್ದ ಪದಕಗಳನ್ನೂ ಮುಟ್ಟುಗೋಲು  ಹಾಕಿಕೊಳ್ಳಲಾಗುತ್ತದೆ ಎಂದು ಎಡಿಎಪಿ ಮುಖ್ಯಸ್ಥ ಅಭಿನವ್ ಮುಖರ್ಜಿ ಇದೇ 16ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News