ಎನ್‍ಆರ್‌ಸಿಯಿಂದ ಕೈಬಿಡಲಾಗಿದ್ದ ಅಸ್ಸಾಂ ಮಹಿಳೆಯ ಗಡಿಪಾರಿಗೆ ಸುಪ್ರೀಂ ತಡೆ

Update: 2022-09-24 12:36 GMT

ಹೊಸದಿಲ್ಲಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್(NRC) ಇದರ ಅಂತಿಮ ಕರಡಿನಿಂದ ಕೈಬಿಡಲಾಗಿದ್ದ ಅಸ್ಸಾಂನ(Assam) ಮಹಿಳೆಯೊಬ್ಬರ ಗಡೀಪಾರಿಗೆ ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ತಡೆಯಾಜ್ಞೆ ವಿಧಿಸಿದೆ.

ಈ ನಿರ್ದಿಷ್ಟ ಮಹಿಳೆ ಭಾರತೀಯ ನಾಗರಿಕಳಲ್ಲ ಎಂದು 2019 ರಲ್ಲಿ ಫಾರಿನರ್ಸ್ ಟ್ರಿಬ್ಯುನಲ್ 2017 ರ ಗುವಹಾಟಿ ಹೈಕೋರ್ಟಿನ  ಆದೇಶವನ್ನು ಎತ್ತಿ ಹಿಡಿತ್ತು. ಆಕೆ ಬಾಂಗ್ಲಾದೇಶದ ಮೂಲಕ ಮಾರ್ಚ್ 25, 1971 ರ ನಂತರ ಅಸ್ಸಾಂಗೆ ಅಕ್ರಮವಾಗಿ ಪ್ರವೇಶಿಸಿದ್ದಳು ಎಂಬುದು ಸಾಬೀತಾಗಿದೆ ಎಂದು ಹೈಕೊರ್ಟ್ ಹೇಳಿತ್ತು.

ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠ ವಿಚಾರಣೆ ನಡೆಸಿತ್ತು.

ಈ ಸಂದರ್ಭ ವಾದ ಮಂಡಿಸಿದ ಮಹಿಳೆಯ ಪರ ವಕೀಲ ಪಿಜೂಶ್ ಕಾಂತಿ ರಾಯ್, ಆಕೆಯ ಎಲ್ಲಾ ಕುಟುಂಬ ಸದಸ್ಯರನ್ನು ಭಾರತೀಯ ನಾಗರಿಕರೆಂದು ಘೋಷಿಸಲಾಗಿದೆ ಎಂದು ಹೇಳಿದ್ದರು.

ಇದನ್ನು ಪರಿಗಣಿಸಿ ಮಹಿಳೆಯ ಗಡೀಪಾರು ಆದೇಶಕ್ಕೆ ಮೂರು ವರ್ಷಗಳ ನಂತರ ನಡೆಯಲಿರುವ ಮುಂದಿನ ವಿಚಾರಣೆ ತನಕ ಸುಪ್ರೀಂ ಕೋರ್ಟ್ ತಡೆ ವಿಧಿಸಿದೆಯಲ್ಲದೆ ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಮತ್ತು ಅಸ್ಸಾಂ ಸರಕಾರಗಳಿಗೆ ಸೂಚಿಸಿದೆ.

ತಾನು ಹುಟ್ಟಿನಿಂದ ಭಾರತೀಯ ನಾಗರಿಕಳು ಎಂದು ಮಹಿಳೆ ವಾದಿಸಿದ್ದಾರೆ. ತನ್ನ ಹೆತ್ತವರ ಹೆಸರು ಕೂಡ ಮತದಾರರ ಪಟ್ಟಿಯಲ್ಲಿದೆ ಎಂಬುದಕ್ಕೆ ಪೂರಕವಾದ ದಾಖಲೆಗಳನ್ನು ಆಕೆ ಸಲ್ಲಿಸಿದ್ದರಲ್ಲದೆ ಸ್ಥಳೀಯ ಪಂಚಾಯತ್ 1971ಗಿಂತ ಮುಂಚೆ ನೀಡಿದ್ದ ಪ್ರಮಾಣಪತ್ರಗಳಲ್ಲಿ ಹಾಗೂ ಮತದಾರರ ಪಟ್ಟಿಯಲ್ಲೂ ಹೆತ್ತವರ ಹೆಸರು ಇದೆ ಎಂಬುದಕ್ಕೆ ದಾಖಲೆಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News