ಟ್ವೆಂಟಿ-20 ವಿಶ್ವಕಪ್ ವಿಜೇತ ತಂಡಕ್ಕೆ 13 ಕೋ.ರೂ. ಬಹುಮಾನ: ಐಸಿಸಿ

Update: 2022-09-30 15:01 GMT
Photo:Facebook

ದುಬೈ, ಸೆ.30: ಆಸ್ಟ್ರೇಲಿಯದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಪುರುಷರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ತಂಡವು 1.6 ಮಿಲಿಯನ್ ಅಮೆರಿಕನ್ ಡಾಲರ್(13 ಕೋ.ರೂ.)ಬಹುಮಾನವನ್ನು ಮನೆಗೊಯ್ಯಲಿದೆ ಎಂದು ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿ ಐಸಿಸಿ ಶುಕ್ರವಾರ ಪ್ರಕಟಿಸಿದೆ.

ರನ್ನರ್ಸ್ ಅಪ್ ತಂಡವು 6.5 ಕೋ.ರೂ. ಪಡೆಯಲಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಅಕ್ಟೋಬರ್ 16ರಿಂದ ಸುಮಾರು ಒಂದು ತಿಂಗಳ ಕಾಲ ನಡೆಯುವ 16 ತಂಡಗಳು ಭಾಗವಹಿಸುವ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಸೋಲುವ ತಂಡಗಳು ತಲಾ 4,00,000 ಯುಎಸ್ ಡಾಲರ್(3.25 ಕೋ.ರೂ.)ತನ್ನದಾಗಿಸಿಕೊಳ್ಳುತ್ತವೆ. ವಿಶ್ವಕಪ್‌ಗೆ ಒಟ್ಟು 5.6 ಮಿಲಿಯನ್ ಡಾಲರ್(45.56 ಕೋ.ರೂ.)ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ.

ಸೂಪರ್-12 ಹಂತದಲ್ಲಿ ನಿರ್ಗಮಿಸಲಿರುವ 8 ತಂಡಗಳೂ ತಲಾ 70,000 ಡಾಲರ್(57 ಲಕ್ಷ ರೂ.)ಬಹುಮಾನ ಪಡೆಯುತ್ತವೆ.

‘‘ಕಳೆದ ವರ್ಷದ ವಿಶ್ವಕಪ್‌ನಂತೆಯೇ ಈವರ್ಷವೂ ಸೂಪರ್-12 ಹಂತದಲ್ಲಿ 30 ಪಂದ್ಯಗಳಿರುತ್ತವೆ. ಪ್ರತಿ ಪಂದ್ಯದ ಗೆಲುವಿಗೆ 40,000 ಡಾಲರ್(32.53 ಲಕ್ಷ ರೂ.)ಬಹುಮಾನವಿರುತ್ತದೆ’’ ಎಂದು ಐಸಿಸಿ ತಿಳಿಸಿದೆ.

ಸೂಪರ್-12 ಹಂತಕ್ಕೆ ನೇರ ಪ್ರವೇಶ ಪಡೆದಿರುವ 8 ತಂಡಗಳೆಂದರೆ: ಅಫ್ಘಾನಿಸ್ತಾನ,ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ.

ಇತರ 8 ತಂಡಗಳಾದ-ನಮೀಬಿಯಾ, ಶ್ರೀಲಂಕಾ, ನೆದರ್‌ಲ್ಯಾಂಡ್, ಯುಎಇ(‘ಎ’ ಗುಂಪು)ಹಾಗೂ ವೆಸ್ಟ್‌ಇಂಡೀಸ್, ಸ್ಕಾಟ್‌ಲ್ಯಾಂಡ್, ಐರ್‌ಲ್ಯಾಂಡ್ ಹಾಗೂ ಝಿಂಬಾಬ್ವೆ(‘ಬಿ’ ಗುಂಪು)ಯನ್ನು ತಲಾ 4 ತಂಡಗಳಿರುವ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಈ ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಾಡಲಿವೆ.

 ಮೊದಲ ಸುತ್ತಿನಲ್ಲಿ ಪಂದ್ಯ ಗೆಲ್ಲುವ ತಂಡಗಳಿಗೆ 40,000 ಡಾಲರ್(32.53 ಲಕ್ಷ ರೂ.) ನೀಡಲಾಗುತ್ತದೆ. ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸುವ ನಾಲ್ಕು ತಂಡಗಳು ಕೂಡ ತಲಾ 40,000 ಡಾಲರ್ ಸ್ವೀಕರಿಸುತ್ತವೆ. ಈ ವರ್ಷದ ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 16ರಿಂದ ನವೆಂಬರ್ 13ರ ತನಕ ನಡೆಯಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News