ಇಂಡೋನೇಷ್ಯಾ: ಫುಟ್ಬಾಲ್ ಅಭಿಮಾನಿಗಳಿಂದ ಪಿಚ್ ಮೇಲೆ ದಾಳಿ; ಕಾಲ್ತುಳಿತದಲ್ಲಿ 127 ಮಂದಿ ಮೃತ್ಯು

Update: 2022-10-02 03:58 GMT

ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 127 ಮಂದಿ ಮೃತಪಟ್ಟು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ಪ್ರಕಟಿಸಿದ್ದಾರೆ.

ಅರೇಮಾ ಎಫ್‍ಸಿ ಮತ್ತು ಪೆರ್ಸೆಬಯ ಸುರಬಯ ಕ್ಲಬ್‍ಗಳ ನಡುವಿನ ಪಂದ್ಯ ರಾತ್ರಿ ಮುಕ್ತಾಯದ ಬಳಿಕ ಸೋತ ತಂಡದ ಬೆಂಬಲಿಗರು ಪಿಚ್ ಮಾಲೆ ದಾಳಿ ನಡೆಸಿದರು. ಈ ಸಂದರ್ಭ ಪೊಲೀಸರು ಅಶ್ರುವಾಯು ಸಿಡಿಸಿದರು. ಇದು ಕಾಲ್ತುಳಿತ ಮತ್ತು ಉಸಿರುಗಟ್ಟುವ ವಾತಾವರಣಕ್ಕೆ ಕಾರಣವಾಯಿತು ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ತಿಳಿಸಿದರು.

ಮಲಂಗ್ ಸ್ಟೇಡಿಯಂನಲ್ಲಿ ಜನ ಪಿಚ್‍ನತ್ತ ನುಗ್ಗುತ್ತಿರುವ ಮತ್ತು ಮೃತದೇಹಗಳನ್ನು ಒಯ್ಯುವ ವೀಡಿಯೊ ದೃಶ್ಯಾವಳಿಗಳು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.

ಈ ಘಟನೆಯ ಬಳಿಕ ಇಂಡೋನೇಷ್ಯಾದ ಪ್ರಮುಖ ಲೀಗ್ ಬಿಆರ್‌ಐ ಲಿಗಾ 1 ಒಂದು ವಾರದ ಅವಧಿಗೆ ಎಲ್ಲ ಪಂದ್ಯಗಳನ್ನು ರದ್ದುಪಡಿಸಿದೆ. ಪೆರ್ಸೆಬಯ ತಂಡ 3-2 ಗೋಲುಗಳ ಅಂತರದಿಂದ ಗೆದ್ದ ಬಳಿಕ ಗದ್ದಲ ಆರಂಭವಾಗಿದ್ದು, ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಫುಟ್ಬಾಲ್ ಅಸೋಸಿಯೇಶನ್ ಆಫ್ ಇಂಡೋನೇಷ್ಯಾ (ಪಿಎಸ್‍ಎಸ್‍ಐ) ಹೇಳಿದೆ.

ಇಂಡೋನೇಷ್ಯಾದಲ್ಲಿ ಈ ಹಿಂದೆ ಕೂಡಾ ಇಂಥ ಅಹಿತಕರ ಘಟನೆಗಳು ನಡೆದಿದ್ದು, ಬದ್ಧ ಪ್ರತಿಸ್ಪರ್ಧಿ ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News