ಅಕ್ರಮ ಗಣಿಗಾರಿಕೆ ಪ್ರಕರಣ: ಜಾರ್ಖಂಡ್ ಸಿಎಂ ಬ್ಯಾಂಕ್‌ ಪಾಸ್‍ಬುಕ್, ಚೆಕ್ ಈಡಿ ವಶ

Update: 2022-10-03 02:41 GMT
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ 

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಹಾಗೂ ಜೆಎಂಎಂ ಮುಖಂಡ ಪಂಕಜ್ ಮಿಶ್ರಾ ಮನೆ ಮೇಲೆ ಕಾನೂನು ಜಾರಿ ನಿರ್ದೇಶನಾಲಯ  (ED) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಮುಖ್ಯಮಂತ್ರಿಯವರ ಬ್ಯಾಂಕ್ ಪಾಸ್‍ಪುಸ್ತಕ ಮತ್ತು ಚೆಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.‌ ಈ ಬಗ್ಗೆ hindustantimes.com ವರದಿ ಮಾಡಿದೆ.

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಹಾಗೂ ಹಣ ದುರ್ಬಳಕೆ ಪ್ರಕರಣದಲ್ಲಿ ಪಂಜಕ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಅವರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಈ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಿಎಂಎಲ್‍ಎ ಪ್ರಕರಣದಲ್ಲಿ ಜುಲೈ 19ರಂದು ಮಿಶ್ರಾ ಬಂಧನವಾಗಿದ್ದು, ನ್ಯಾಯಾಂಗ ವಶದಲ್ಲಿದ್ದಾರೆ.

ಮಿಶ್ರಾ ಜತೆಗೆ ಅವರ ಸಹಚರರಾದ ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ಕೂಡಾ ಆರೋಪಿಗಳಾಗಿದ್ದಾರೆ. ಇವರನ್ನು ಕ್ರಮವಾಗಿ ಆಗಸ್ಟ್ 4 ಹಾಗೂ 5ರಂದು ಬಂಧಿಸಲಾಗಿತ್ತು. ತನಿಖೆ ಆರಂಭಿಸಿದ ಈಡಿ ಅಧಿಕಾರಿಗಳು ಶಿಬ್‍ಗಂಜ್ ಜಿಲ್ಲೆಯಲ್ಲಿ ಮಿಶ್ರಾ ಹಾಗೂ ಇತರರ ವಿರುದ್ಧ ಮಾರ್ಚ್ 8ರಂದು ಎಫ್‍ಐಆರ್ ದಾಖಲಿಸಿದ್ದರು.

2021ರಲ್ಲಿ ತಮಗೇ ಗಣಿಗಾರಿಕೆ ಲೀಸ್ ಮಂಜೂರು ಮಾಡಿಕೊಂಡ ಆರೋಪವನ್ನು ಸೊರೆನ್ ಎದುರಿಸುತ್ತಿದ್ದಾರೆ. ಆಗಸ್ಟ್ ನಲ್ಲಿ ಚುನಾವಣಾ ಆಯೋಗ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಅಭಿಪ್ರಾಯ ಕಳುಹಿಸಿ, ಸೊರೆನ್  ಅನರ್ಹತೆಗೆ ಶಿಫಾರಸ್ಸು ಮಾಡಿತ್ತು. ಸಿಎಂ ಅವರ ಮನವಿಯ ಹೊರತಾಗಿಯೂ ಅಭಿಪ್ರಾಯವನ್ನು ಬಹಿರಂಗಪಡಿಸಲು ಆಯೋಗ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News