×
Ad

ಮಾನವ ವಿಕಾಸಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಗೆದ್ದ ಸ್ವಾಂಟೆ ಪಾಬೊ

Update: 2022-10-03 15:51 IST
(Photo: Twitter/@Radiorwanda_RBA)

ಹೊಸದಿಲ್ಲಿ,ಅ.3: ಅಳಿದುಹೋಗಿರುವ ಹೊಮಿನಿನ್‌ಗಳು (ಮಾನವವಂಶಿ) ಮತ್ತು ಮಾನವ ವಿಕಾಸದ ಜಿನೋಮ್‌ಗಳಿಗೆ ಸಂಬಂಧಿಸಿದ ತನ್ನ ಸಂಶೋಧನೆಗಳಿಗಾಗಿ ಸ್ವೀಡನ್‌ನ ಸ್ವಾಂಟೆ ಪಾಬೊ ಅವರು ವೈದ್ಯಕೀಯ ಶಾಸ್ತ್ರಕ್ಕಾಗಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದು ಈ ವರ್ಷ ಪ್ರಕಟಿಸಲಾದ ಮೊದಲ ನೊಬೆಲ್ ಪ್ರಶಸ್ತಿಯಾಗಿದೆ.

ಪಾಬೊ ಈಗಿನ ಮಾನವನ ಅಳಿದಿರುವ ಸಂಬಂಧಿ ನಿಯಾಂಡರ್‌ಥಾಲ್‌ಗಳ ಜಿನೋಮ್ ಅನ್ನು ಅನುಕ್ರಮಗೊಳಿಸಿದ್ದಾರೆ. ಈ ಹಿಂದೆ ಗೊತ್ತಿರದಿದ್ದ ಹೊಮಿನಿನ್ ಡೆನಿಸೋವಾವನ್ನೂ ಅವರು ಸಂಶೋಧಿಸಿದ್ದರು.

ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆಯ ಬಳಿಕ ಈಗ ಅಳಿದಿರುವ ಈ ಹೊಮೊನಿನ್‌ಗಳಿಂದ ಜೀನ್‌ಗಳು ಹೊಮೊ ಸಪೀನ್‌ಗಳಿಗೆ ವರ್ಗಾವಣೆಯಾಗಿದ್ದವು ಎನ್ನುವುದನ್ನು ಪಾಬೊ ಕಂಡು ಹಿಡಿದಿದ್ದರು. ಈಗಿನ ಮಾನವರಿಗೆ ಜೀನ್‌ಗಳ ಈ ಪ್ರಾಚೀನ ಹರಿವು ಇಂದು ಶಾರೀರಿಕ ಪ್ರಸ್ತುತತೆಯನ್ನು ಹೊಂದಿದೆ. ನಮ್ಮ ಪ್ರತಿರೋಧಕ ವ್ಯವಸ್ಥೆಯು ಸೋಂಕುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಇದಕ್ಕೆ ಉದಾಹರಣೆಯಾಗಿದೆ. ಪಾಬೊ ಅವರ ಸಂಶೋಧನೆಯು ಪಾಲಿಯೊಜೆನೊಮಿಕ್ಸ್ ಎಂಬ ಸಂಪೂರ್ಣ ಹೊಸ ವೈಜ್ಞಾನಿಕ ವಿಭಾಗವನ್ನು ಹುಟ್ಟು ಹಾಕಿದೆ ಎಂದು ನೊಬೆಲ್ ಪ್ರಕಟಣೆಯು ತಿಳಿಸಿದೆ.

ಪಾಬೊ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಇವೊಲ್ಯೂಷನರಿ ಆ್ಯಂಥ್ರೊಪಾಲಜಿಯ ನಿರ್ದೇಶಕರಾಗಿದ್ದಾರೆ.

ಕಳೆದ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮಾನವ ಶರೀರವು ತಾಪಮಾನ ಮತ್ತು ಸ್ಪರ್ಶಗಳನ್ನು ಹೇಗೆ ಗ್ರಹಿಸುತ್ತದೆ ಎನ್ನುವ ಕುರಿತು ತಮ್ಮ ಸಂಶೋಧನೆಗಳಿಗಾಗಿ ಡೇವಿಡ್ ಜ್ಯೂಲಿಯಸ್ ಮತ್ತು ಆರ್ಡೆಮ್ ಪಾಟಾಪೋಶಿಯನ್ ಪಡೆದಿದ್ದರು.

ಮಂಗಳವಾರ ಭೌತಶಾಸ್ತ್ರ,ಬುಧವಾರ ರಾಸಾಯನಿಕ ಶಾಸ್ತ್ರ,ಗುರುವಾರ ಸಾಹಿತ್ಯ,ಶುಕ್ರವಾರ ಶಾಂತಿ ಮತ್ತು ಅ.10ರಂದು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗಳು ಪ್ರಕಟಗೊಳ್ಳಲಿವೆ.

ಪ್ರಶಸ್ತಿಗಳು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 9 ಲಕ್ಷ ಡಾ.ಗಳು) ನಗದು ಬಹುಮಾನವನ್ನು ಒಳಗೊಂಡಿದ್ದು,ಡಿ.10ರಂದು ವಿಜೇತರಿಗೆ ಪ್ರದಾನಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News